ಚಾಮರಾಜನಗರ:ಖಾಸಗಿ ಶಾಲೆಗಳು ಮತ್ತು ಸಂಸ್ಥೆಗಳು ಆಯೋಜಿಸುತ್ತಿದ್ದ ಬೇಸಿಗೆ ಶಿಬಿರಗಳು ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲೂ ಆಯೋಜನೆ ಆಗಲಿವೆ.
ಸರ್ಕಾರಿ ಶಾಲೆಗಳ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೌದು, ಗೋಪಿನಾಥಂ ಶಾಲೆಯಲ್ಲಿ ವಾಸ್ತವ್ಯದ ಬಳಿಕ ಸರ್ಕಾರಿ ಶಾಲೆಗಳ ಭೇಟಿ ವೇಳೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಾಲಿನ ಶೈಕ್ಷಣಿಕ ವರ್ಷದ ಬೇಸಿಗೆ ರಜೆ ವೇಳೆ ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ಸಂಭ್ರಮ ಎಂಬ ಶಿಬಿರ ಆಯೋಜಿಸುತ್ತಿದ್ದು, ಪಠ್ಯೇತರ ಚಟುವಟಿಕೆಗಳು, ಹೊಲ-ತೋಟಕ್ಕೆ ಮಕ್ಕಳ ಪ್ರವಾಸ, ಹಾಡು- ನೃತ್ಯವನ್ನು ಮಕ್ಕಳಿಗೆ ಹೇಳಿಕೊಡಲಿದ್ದು ಬೇಸಿಗೆ ಶಿಬಿರದಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಗುವುದು ಎಂದು ತಿಳಿಸಿದರು.
ಶಾಲಾ ವಾಸ್ತವ್ಯ ಫಲಪ್ರದವೇ ಎಂಬ ಪ್ರಶ್ನೆಗೆ ಉತ್ತರಿಸಿ, ಶಾಲಾ ವಾಸ್ತವ್ಯ ಎಂಬುದು ಕಾರ್ಯಕ್ರಮವಲ್ಲ, ನನ್ನ ಮನಸ್ಸಿಗೆ ತೃಪ್ತಿ, ಆನಂದ ನೀಡುವ ಕಾರ್ಯವಾಗಿದೆ. ಮುಂದಿನ ವರ್ಷದಿಂದ ಗೋಪಿನಾಥಂನಲ್ಲಿ ಕನ್ನಡ ಮಾಧ್ಯಮ ಶಾಲೆ ಪ್ರಾರಂಭವಾಗಲಿದ್ದು, ಶಿಕ್ಷಕರ ಕೊರತೆ ಮತ್ತು ಲ್ಯಾಬ್ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಂಡಿದ್ದೇನೆ. ಪಾಲಾರ್ ಶಾಲೆ ಕಾಂಪೌಂಡ್ ಹಾಕಲು ಕ್ರಮ ತೆಗೆದುಕೊಳ್ಳಲಿದ್ದು, ಸುತ್ತಮುತ್ತಲಿನ ಗ್ರಾಮದಲ್ಲಿನ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು. ಜೊತೆಗೆ, ಶಾಲಾ ವಾಸ್ತವ್ಯದ ಬಳಿಕ ಆಗಿರುವ ಕೆಲಸಗಳನ್ನು ಅರಿಯಲು ಅಧಿಕಾರಿಗೆ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದರು.
ಬಾಗಿನ ಅರ್ಪಣೆ: ಶಾಲಾ ವಾಸ್ತವ್ಯದ ಬಳಿಕ ಮಂಗಳವಾರ ಬೆಳಗ್ಗೆ 2 ವರ್ಷಗಳ ಬಳಿಕ ತುಂಬಿದ ಗೋಪಿನಾಥಂ ಜಲಾಶಯಕ್ಕೆ ಸಚಿವರು ಬಾಗಿನ ಅರ್ಪಿಸಿದರು. ಅರಣ್ಯ ಇಲಾಖೆಯ ಮಿಸ್ಟ್ರಿ ಕ್ಯಾಂಪಿನ ಬಳಿ ಡಿಸಿ ಬಿ.ಬಿ.ಕಾವೇರಿ, ಎಸ್ಪಿ ಹೆಚ್.ಡಿ.ಆನಂದಕುಮಾರ್, ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರೊಂದಿಗೆ 5 ಜೊತೆ ಮೊರದ ಬಾಗಿನವನ್ನು ಗಂಗೆಗೆ ಅರ್ಪಿಸಲಾಯಿತು.