ಶಾಸಕ ಪುಟ್ಟರಂಗಶೆಟ್ಟಿ ಬೆಂಬಲಿಗರಿಂದ ಪ್ರತಿಭಟನೆ ಚಾಮರಾಜನಗರ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ಕೊಡದಿದ್ದರೇ ಕಾಂಗ್ರೆಸ್ ಕಚೇರಿ ಮುಂದೆ ಸೂಸೈಡ್ ಮಾಡಿಕೊಳ್ಳುವೆ ಎಂದು ಅಭಿಮಾನಿಯೊಬ್ಬ ಪತ್ರ ಬರೆದು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಶೇರ್ ಮಾಡಿರುವ ಘಟನೆ ನಡೆದಿದೆ.
ನಲ್ಲೂರು ಮೋಳೆಯ ಚಂದ್ರಶೇಖರ್ ಎಂಬವರು ಈ ಪತ್ರ ಬರೆದಿದ್ದು "ನಮ್ಮ ಉಪ್ಪಾರ ಸಮಾಜದ ಏಕೈಕ ಶಾಸಕ, ನಾಲ್ಕು ಬಾರಿ ಗೆದ್ದಿರುವ ಸಿ. ಪುಟ್ಟರಂಗಶೆಟ್ಟಿಗೆ ಕಾಂಗ್ರೆಸ್ ಸಚಿವ ಸ್ಥಾನ ಕೊಡದಿದ್ದರೆ ನಾನು ಚಂದ್ರಶೇಖರ್ s/o ನಂಜುಂಡಶೆಟ್ಟಿ ನಲ್ಲೂರು ಮೋಳೆ ಕಾಂಗ್ರೆಸ್ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದು. ನಂಬಿಕೆ ದ್ರೋಹದ ಕೆಲಸವನ್ನು ಕಾಂಗ್ರೆಸ್ ಮತ್ತು ಹೈಕಮಾಂಡ್ ಮಾಡಿದೆ.
ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೊಡದಿದ್ದರೆ ಜಿಲ್ಲಾ ಅಥವಾ ಕೆಪಿಸಿಸಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಆತ್ಮಹತ್ಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರೇ ಕಾರಣಕರ್ತರು ಎಂದು ಎಚ್ಚರಿಕೆ ನೀಡಿದ್ದ.
ನನ್ನ ಸಾವಿನಲ್ಲೂ ಸಹ ನಮ್ಮ ಉಪ್ಪಾರ ಸಮಾಜ ನಿಮ್ಮ ಪಕ್ಷವನ್ನು ಬಿಟ್ಟು ಉಗ್ರ ಹೋರಾಟ ಮಾಡುತ್ತದೆ ಎಂದು ಪತ್ರದಲ್ಲಿ ಚಂದ್ರಶೇಖರ ಬರೆದಿದ್ದಾರೆ. ಉಪಸಭಾಪತಿ ಸ್ಥಾನಬೇಡ. ಉಪ್ಪಾರ ಸಮಾಜದಲ್ಲಿ ನಾಲ್ಕು, ಐದು ಶಾಸಕರಿದ್ದಿದ್ದರೆ ಈ ಸ್ಥಾನ ಸ್ವೀಕಾರ ಮಾಡಬಹುದಿತ್ತು. ಆದರೆ ಒಬ್ಬರೇ ಇರುವುದರಿಂದ ಸಚಿನ ಸ್ಥಾನ ನೀಡಬೇಕೆಂದು ಆತ ಒತ್ತಾಯಿಸಿದ್ದನು.
ಸಚಿವ ಸ್ಥಾನ ಕೊಡಬೇಕು ಎಂದು ರಸ್ತೆತಡೆ: ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮಂತ್ರಿ ಸ್ಥಾನ ಕೊಡಲೇಬೇಕು ಎಂದು ಆಗ್ರಹಿಸಿ ಚಾಮರಾಜನಗರದಲ್ಲಿ ಉಪ್ಪಾರ ಸಮುದಾಯ ಸೇರಿದಂತೆ ಶಾಸಕರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಿಂದ ಮೆರವಣಿಗೆ ಹೊರಟ ಅಭಿಮಾನಿಗಳು ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು.
ಡೆಪ್ಯುಟಿ ಸ್ಪೀಕರ್ ಹುದ್ದೆ ಬೇಡ, ಸಚಿವ ಸ್ಥಾನ ಕೊಡಬೇಕು, ರಾಜ್ಯದ ಉಪ್ಪಾರ ಸಮುದಾಯದ ಏಕೈಕ ಶಾಸಕ ಹಾಗೂ ಚಾಮರಾಜನಗರ ಜಿಲ್ಲೆಯ ಹಿರಿಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮಂತ್ರಿ ಪದವಿ ನೀಡದಿರುವುದು ಸರಿಯಲ್ಲ. ಪ್ರಬಲ ನಾಯಕರನ್ನು ಸೋಲಿಸಿ ನಾಲ್ಕನೇ ಬಾರಿ ಗೆದ್ದಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದು, ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಸಿದ್ದು ಕಟ್ಟಾ ಬೆಂಬಲಿಗ - 4 ಬಾರಿ ಶಾಸಕ:ಸಿ.ಪುಟ್ಟರಂಗಶೆಟ್ಟಿ ಅವರು ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ "ಈಗಲೂ ನನಗೆ ಸಿದ್ದರಾಮಯ್ಯನೇ ಸಿಎಂ" ಎಂದು ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದರು. ಹಾಗೆಯೇ, ಕ್ಷೇತ್ರ ಹುಡುಕಾಟದ ವೇಳೆ ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ ಎಂದು ಆಹ್ವಾನ ಕೊಟ್ಟಿದ್ದರು. ಸಿದ್ದು ಆಪ್ತ ಬಳಗದ ಶಾಸಕರಲ್ಲಿ ಗುರುತಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಅವರ ಬೆಂಬಲಿಗರ ಹಾಗು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ತಂದೆ-ಮಗ ಇಬ್ಬರಿಗೂ ಕೈತಪ್ಪಿದ ಸಚಿವ ಸ್ಥಾನ: ರಾಜಭವನದ ಬಳಿ ಎಂ ಕೃಷ್ಣಪ್ಪ, ಪ್ರಿಯಾಕೃಷ್ಣ ಬೆಂಬಲಿಗರ ಆಕ್ರೋಶ