ಚಾಮರಾಜನಗರ: ಆರೋಗ್ಯ ಸಚಿವ ಸುಧಾಕರ್ ಸುಳ್ಳು ಮಾಹಿತಿ ಕೊಟ್ಟಿದ್ದು, ಆಮ್ಲಜನಕ ಕೊರತೆಯಿಂದಲೇ 24 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾತನಾಡಿ, ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ಡಿಸಿ, ಜಿಲ್ಲಾ ಸರ್ಜನ್ ಹಾಗೂ ಡೀನ್ ಒಪ್ಪಿಕೊಂಡಿದ್ದು, ಆಮ್ಲಜನಕ ಕೊರತೆಯಿಂದಲೇ 24 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ, ಎಲ್ಲರೂ ರಾತ್ರಿ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ ಎಂಬ ಶಾಕಿಂಗ್ ಹೇಳಿಕೆ ನೀಡಿದರು.
ಸುಧಾಕರ್ ಸುಳ್ಳು ಹೇಳಿದ್ದಾರೆ, ಆಮ್ಲಜನಕ ಕೊರತೆಯಿಂದಲೇ 24 ಜನ ಸತ್ತಿದ್ದಾರೆ: ಸಿದ್ದರಾಮಯ್ಯ - ಆಕ್ಸಿಜೆನ್ ದುರಂತ
ಮೃತರ ಸಂಖ್ಯೆಯಲ್ಲಿ ಮತ್ತು ಆಮ್ಲಜನಕದ ಪೂರೈಕೆಯಲ್ಲಿ ಸಚಿವ ಸಂಪೂರ್ಣ ಸುಳ್ಳು ಮಾಹಿತಿಯನ್ನು ನೀಡಿದ್ದು ಆಮ್ಲಜನಕ ಕೊರತೆಯಿಂದಲೇ ಅಮಾಯಕ ಜೀವಗಳು ಅಸುನೀಗಿವೆ.
ಆರೋಗ್ಯ ಸಚಿವ ಸಂಪೂರ್ಣ ಸುಳ್ಳು ಮಾಹಿತಿ ನೀಡಿದ್ದಾರೆ
ಮೃತರ ಸಂಖ್ಯೆಯಲ್ಲಿ ಮತ್ತು ಆಮ್ಲಜನಕದ ಪೂರೈಕೆಯಲ್ಲಿ ಸಚಿವ ಸಂಪೂರ್ಣ ಸುಳ್ಳು ಮಾಹಿತಿಯನ್ನು ನೀಡಿದ್ದು ಆಮ್ಲಜನಕ ಕೊರತೆಯಿಂದಲೇ ಅಮಾಯಕ ಜೀವಗಳು ಅಸುನೀಗಿವೆ. ಇದರ ಸಂಪೂರ್ಣ ಹೊಣೆಯನ್ನು ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೊರಬೇಕು ಎಂದು ಕಿಡಿಕಾರಿದರು.
ಉಸ್ತುವಾರಿ ಮಂತ್ರಿ ಬೆಂಗಳೂರಿನಲ್ಲಿ ಮಜಾ ಮಾಡುತ್ತಿದ್ದಾರೆ
ಜನರ ಜೀವವನ್ನು ಕಾಪಾಡಲಾಗದವರಿಗೆ ಆಡಳಿತದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಸರ್ಕಾರ ನಡೆಸುವವರು ಅದಕ್ಷರು, ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಉಸ್ತುವಾರಿ ಮಂತ್ರಿ ಬೆಂಗಳೂರಿನಲ್ಲಿ ಮಜಾ ಮಾಡುತ್ತಿದ್ದಾರೆ, ಬೆಂಗಳೂರಿನಲ್ಲೇ ಆಕ್ಸಿಜನ್ ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ತನಿಖೆಗೆ ಈ ಕ್ಷಣವೇ ಸಿಎಂ ಆದೇಶಿಸಬೇಕು
ಸ್ವತಂತ್ರ ಸಂಸ್ಥೆಯೊಂದು ಈ ದುರಂತದ ತನಿಖೆ ನಡೆಸಬೇಕು. ಅಧಿಕಾರಿಯಿಂದ ತನಿಖೆ ಮಾಡಿಸುವುದಲ್ಲ, ಆದ್ದರಿಂದ ಈ ನ್ಯಾಯಾಂಗ ತನಿಖೆಗೆ ಈ ಕ್ಷಣವೇ ಸಿಎಂ ಆದೇಶಿಸಬೇಕು, ತಡವಾದರೇ ಪ್ರಕರಣವೇ ಮುಚ್ಚಿಹೋಗಲಿದೆ, ಮೃತ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ
ಚಾಮರಾಜನಗರ ಡಿಸಿ ಹೇಳುತ್ತಾರೆ, ಮೈಸೂರಿನಿಂದ ಆಮ್ಲಜನಕ ಪೂರೈಕೆ ಮಾಡಿಲ್ಲ ಅಂತಾ, ಆದರೆ, ಅಲ್ಲಿನ ಡಿಸಿ ಹೇಳಿದ್ದಾರೆ ಚಾಮರಾಜನಗರದವರೇ ತೆಗೆದುಕೊಂಡು ಹೋಗಿಲ್ಲ ಅಂತ. ಈ ಕುರಿತು ಕೂಡ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿಮ್ಮ ತಪ್ಪಿಲ್ಲ ಎಂದ ಮೇಲೆ ಅವರ ಹೇಳಿಕೆ ವಿರುದ್ದ ಪ್ರತಿಕ್ರಿಯೆ ಕೊಡಿ ಎಂದಿದ್ದು, ಸರ್ಕಾರಕ್ಕೆ ಈ ಕುರಿತು ಪತ್ರ ಬರೆಯುತ್ತೇನೆ ಎಂದಿದ್ದಾರೆ.
ಒಟ್ಟಿನಲ್ಲಿ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಯಲಿ ಎಂದು ಆಗ್ರಹಿಸಿದರು. ಇದಕ್ಕೂ ಮುನ್ನ, ಮೃತ ಕುಟುಂಬಸ್ಥರ ಸಮಸ್ಯೆಗಳನ್ನು ಆಲಿಸಿ ನ್ಯಾಯ ದೊರಕಿಸಿಕೊಡುವ ಭರವಸೆ ಕೊಟ್ಟರು.