ಚಾಮರಾಜನಗರ: ಆಮ್ಲಜನಕ ದುರಂತದಲ್ಲಿ ಮೃತಪಟ್ಟ 24 ಕುಟುಂಬಗಳ ಮನೆಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಸದಸ್ಯರು ಭೇಟಿ ನೀಡಿದರು. ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್ ವಿತರಿಸಿ ಕುಟುಂಬಗಳಿಗೆ ಆಗಬೇಕಿರುವ ಸಹಾಯದ ಸರ್ವೇ ಕಾರ್ಯ ನಡೆಸಿದರು.
ಟ್ರಸ್ಟ್ನ ರಾಜ್ಯಾಧ್ಯಕ್ಷ ರಮೇಶ್ ಕಿಟ್ಟಿ ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಮುಖಂಡ ಚಾ.ಸಿ. ಸೋಮನಾಯಕ ನೇತೃತ್ವದಲ್ಲಿ ಪ್ರತಿ ಮನೆಗಳಿಗೂ ಭೇಟಿ ನೀಡಿದ ಟ್ರಸ್ಟ್ನ ಕಾರ್ಯಕರ್ತರು ಒಂದು ತಿಂಗಳಿಗಾಗುವಷ್ಟು ದಿನಸಿ ವಿತರಿಸಿದರು. ಜೊತೆಗೆ ಸಂತ್ರಸ್ತರ ಕುಟುಂಬಗಳ ಸ್ಥಿತಿ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಟ್ಟಿ ಮಾಡಿಕೊಂಡರು.
ಸಂತ್ರಸ್ತರ ಮಕ್ಕಳ ಜಬಾಬ್ದಾರಿ:
ಸಂತ್ರಸ್ತರ ಮಕ್ಕಳು ಅವರ ಇಚ್ಛೆಗನುಸಾರವಾಗಿ ಅವರು ಓದುವ ತನಕ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ಟ್ರಸ್ಟ್ ತೆಗೆದುಕೊಳ್ಳಲಿದೆ. ಮಕ್ಕಳನ್ನು ಬೆಂಗಳೂರಿಗೆ ಬೇಕಾದರೂ ಕಳುಹಿಸಬಹುದು. ಇಲ್ಲವೇ ಸ್ಥಳೀಯವಾಗಿ ವಿದ್ಯಾಭ್ಯಾಸ ನಡೆಸಿದರೂ ನೆರವು ನೀಡಲಾಗುವುದು. ಸಂತ್ರಸ್ತರ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡಲಿದ್ದು, ನೌಕರಿ, ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡಲಾಗುವುದು, ದುರಂತದಲ್ಲಿ ಮೃತಪಟ್ಟ ಎಲ್ಲ ಕುಟುಂಬಕ್ಕೂ ನೆರವು ನೀಡಲಿದ್ದು, ಅಗತ್ಯವಿರುವವರು ಟ್ರಸ್ಟ್ ಸಂಪರ್ಕಿಸುವಂತೆ ರಮೇಶ್ ಕಿಟ್ಟಿ ಕೋರಿದ್ದಾರೆ.