ಚಾಮರಾಜನಗರ :ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಹೊಟ್ಟೆ ಕುಯ್ಯದೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ತಾಲೂಕಿನ ಸಂತೇಮರಹಳ್ಳಿಯ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಶಸ್ತ್ರಚಿಕಿತ್ಸೆ ಕಾರ್ಯಾಗಾರದಲ್ಲಿ ಆರು ಮಂದಿ ಮಹಿಳೆಯರಿಗೆ ಹೊಟ್ಟೆ ಕುಯ್ಯದೆ ಸಾಧನಗಳನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ವೈದ್ಯರು ಆಪರೇಷನ್ ಮಾಡುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡಲಾಗಿದೆ. ವಿದೇಶ, ಹೊರರಾಜ್ಯಗಳ ವೈದ್ಯರು ಸೇರಿದಂತೆ ಸುಮಾರು 200 ಮಂದಿ ಶಸ್ತ್ರಚಿಕಿತ್ಸೆಯನ್ನು ವೀಕ್ಷಿಸಿ ಹಲವು ಸಂದೇಹಗಳನ್ನು ಪರಿಹರಿಸಿಕೊಂಡಿದ್ದಾರೆ.
ಏನಿದು ಶಸ್ತ್ರಚಿಕಿತ್ಸೆ?:ಸಾಮಾನ್ಯವಾಗಿ ಸ್ತ್ರೀರೋಗಗಳ ಬಗ್ಗೆ ಮಹಿಳೆಯರು ಹೆಚ್ಚು ನಿರ್ಲಕ್ಷ್ಯ ತೋರುತ್ತಾರೆ. ಬಹುಪಾಲು ಸ್ತ್ರೀಯರಿಗೆ ಹೊಟ್ಟೆ ಕೊಯ್ದು ನಡೆಸುವ ಶಸ್ತ್ರಚಿಕಿತ್ಸೆ ಎಂದರೆ ಭಯ ಪಡುತ್ತಾರೆ. ಆದರೆ, ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಡೆದ ಶಸ್ತ್ರಚಿಕಿತ್ಸೆ ಮಹಿಳೆಯರಿಗೆ ಈ ಭೀತಿ ಹೋಗಲಾಡಿಸಿದೆ. ಅಲ್ಲದೇ ಗರ್ಭಕೋಶ ಶಸ್ತ್ರ ಚಿಕಿತ್ಸೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನೇರಪ್ರಸಾರವನ್ನೂ ಏರ್ಪಡಿಸಲಾಗಿತ್ತು.
ಗರ್ಭಕೋಶದ ಗಡ್ಡೆ, ಗರ್ಭಕೋಶ ಶಸ್ತ್ರಚಿಕಿತ್ಸೆ ಬಳಿಕ ಸಡಿಲಗೊಂಡ ಚೀಲದಿಂದ ಮೂತ್ರ ಸೋರುವುದು, ಹೆರಿಗೆ ಬಳಿಕ ಕೆಮ್ಮಿದಾಗ, ನಡೆದಾಗ ಮೂತ್ರ ಸೋರುವುದು, ಯೋನಿ ಭಾಗ ಜರುಗಿರುವುದು ಸೇರಿ ಗರ್ಭಕೋಶದ ಇತರ ನ್ಯೂನ್ಯತೆಗಳನ್ನು ಹೊಟ್ಟೆ ಕೊಯ್ಯದೆ, ಲ್ಯಾಪ್ರೋಸ್ಕೋಪಿ ವಿಧಾನ ಬಳಸದೆ ಯೋನಿ ಭಾಗದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮೈಸೂರು, ಬೆಂಗಳೂರಿನ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗಳಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಲು ಅಂದಾಜು 1ರಿಂದ 2 ಲಕ್ಷ ರೂ. ಹಣ ಖರ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿರುವುದು ಸರ್ಕಾರಿ ಆಸ್ಪತ್ರೆಯ ಸೇವೆ ಬಗ್ಗೆ ಜನರಲ್ಲಿ ಹೆಮ್ಮೆ ಮೂಡಿಸಿದೆ.