ಕೊಳ್ಳೇಗಾಲ (ಚಾಮರಾಜನಗರ) :ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಲು ಸಾರ್ವಜನಿಕರ ಶಿಕ್ಷಣ ಇಲಾಖೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮನೋಸ್ಥೈರ್ಯ ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರಿಗಿರುವ ಜವಾಬ್ದಾರಿಯನ್ನು ಅರಿವು ಮೂಡಿಸಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಮಾತೃ-ಪಿತೃ ವಂದನಾ ಕಾರ್ಯಕ್ರಮ ನಿನ್ನೆ ಕೊಳ್ಳೇಗಾಲದಲ್ಲಿ ನಡೆಯಿತು.
ಸರ್ಕಾರಿ ಎಸ್.ವಿ.ಕೆ.ಪ.ಪೂ ಕಾಲೇಜಿನ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೊಳ್ಳೇಗಾಲ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ "ಮಾತಾ-ಪಿತೃ" ವಂದನಾ ಮತ್ತು ಪೋಷಕರೊಡನೆ ಸಂವಾದ ಕಾರ್ಯಕ್ರಮಕ್ಕೆ ಶಾಸಕ ಎನ್ ಮಹೇಶ್ ಚಾಲನೆ ನೀಡಿದರು.
ಪಟ್ಟಣದ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರೌಢಶಾಲಾ ಶಾಲೆಯಲ್ಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಂದಿರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳು ಸಾಮೂಹಿಕವಾಗಿ ತಮ್ಮ ತಂದೆ- ತಾಯಿಗಳ ಪಾದಗಳನ್ನು ತೊಳೆದು ಅರಿಶಿನ-ಕುಂಕುಮ ಹಚ್ಚಿ, ಪುಷ್ಪಾರ್ಚನೆ ಮಾಡಿ ಪಾದ ಪೂಜೆ ಮಾಡಿದರು. ಮೂಲಕ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಓದಿದ ಶಾಲೆಗೆ ಕೀರ್ತಿ, ಗುರುಗಳಿಗೆ ಗೌರವ ತಂದೆ- ತಾಯಿಯ ಕನಸ್ಸನ್ನು ನನಸು ಮಾಡುತ್ತೇವೆಂದು ಸಂಕಲ್ಪ ತೊಟ್ಟರು. ಮಕ್ಕಳು ಪೋಷಕರ ಪಾದ ಸ್ಪರ್ಶಿಸಿ ಪೂಜೆ ಮಾಡಲು ಮುಂದಾದಾಗ ಭಾವುಕರಾದ ಪೋಷಕರು ಒಳ್ಳೆಯದಾಗಲಿ ಚೆನ್ನಾಗಿ ಓದಿ ಎಂದು ಆಶೀರ್ವಾದಿಸಿದರು.
ಇದೇ ವೇಳೆ ಶಾಸಕ ಎನ್.ಮಹೇಶ್ ಮಾತನಾಡಿ, ಮಾತೃ- ಪಿತೃ ವಂದನಾ ಕಾರ್ಯಕ್ರಮ ವಿಶೇಷವಾಗಿದ್ದು, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ತಂದೆ- ತಾಯಿಗಳ ಪಾದ ಪೂಜೆ ಮಾಡುವ ಮೂಲಕ ಪೋಷಕರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮೂಲಕ ಮಕ್ಕಳನ್ನು ಓದಿಸಬೇಕೆಂಬ ಅನಿಸಿಕೆಯನ್ನು ಪೋಷಕರಲ್ಲಿ ಹುಟ್ಟು ಹಾಕುವುದು ಇದರ ಉದ್ದೇಶವಾಗಿದೆ. ಪಾದ ಪೂಜೆ ಮಾಡಿದ ಮಕ್ಕಳಿಗೆ ಚೆನ್ನಾಗಿ ಓದಲಿ, ಎತ್ತರಕ್ಕೆ ಬೆಳೆಯಲಿ ಎಂದು ಹೃದಯದಿಂದ ತಂದೆ- ತಾಯಿಗಳು ಆಶೀರ್ವಾದಿಸಿದ್ದಾರೆ. ಮಾತೃ- ಪಿತೃ ವಂದನಾ ಒಂದು ಪ್ರೇರಕ ಶಕ್ತಿಯಾಗಿ ಕೆಲಸಮಾಡುತ್ತೆ ಎಂದರು.