ಚಾಮರಾಜನಗರ:ಪಿಯು ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಗತ್ಯಬಿದ್ದರೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷಣ ರಹಿತ ಕೊರೊನಾ ನನ್ನಲ್ಲೂ ಇರಬಹುದು- ನಿಮ್ಮಲ್ಲೂ ಇರಬಹುದು, ಪರಿಶೀಲಿಸಿ ಅಗತ್ಯವಿದ್ದರೆ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲಾಗುವುದು, ಸಾಮಾಜಿಕ ಅಂತರ ಕಾಯ್ದುಕೊಂಡೇ ಪರೀಕ್ಷೆ ಬರೆಯಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಶೈಕ್ಷಣಿಕ ವರ್ಷ ಎಂದಿನಿಂದ ಆರಂಭವಾಗಬೇಕೆಂದು ಇನ್ನು ಶಿಕ್ಷಣ ಇಲಾಖೆ ನಿರ್ಧರಿಸಿಲ್ಲ, ಕೇಂದ್ರ ಸರ್ಕಾರ ಸೂಚನೆಯಂತೆ ಪಾಲಕರ ಸಭೆ ನಡೆಸಲಾಗುತ್ತಿದೆ, ನಾಳೆ ಕೊನೆಯ ದಿನದ ಸಭೆ ನಡೆಯಲಿದೆ. ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಲಿದೆ, ಆದಾದ ಬಳಿಕವಷ್ಟೇ ನಿರ್ಧಾರ ಎಂದರು.