ಚಾಮರಾಜನಗರ:ಒಂದೂವರೆ ವರ್ಷಗಳ ಬಳಿಕ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತಿದ್ದಂತೆ ಕುರಿಮಂದೆಯಂತೆ ಮಕ್ಕಳನ್ನು ತುಂಬಿಸಿಕೊಂಡು ಅಪಾಯಕಾರಿಯಾಗಿ ಆಟೋ ಓಡಿಸುವವರ ಸಂಖ್ಯೆಯೂ ಜಿಲ್ಲೆಯಲ್ಲಿ ಹೆಚ್ಚಾಗಿದೆ.
ಶಾಲಾ ಮಕ್ಕಳನ್ನು ಅಪಾಯಕಾರಿಯಾಗಿ ಆಟೋದಲ್ಲಿ ಕುಳ್ಳಿರಿಸಿಕೊಂಡು ಕೊಳ್ಳೇಗಾಲ ಭಾಗ ಮತ್ತು ಗುಂಡ್ಲುಪೇಟೆ ಭಾಗದಲ್ಲಿ ಆಟೋ ಚಾಲಕರು ಅಪಾಯಕ್ಕೆ ಎಡೆ ಮಾಡಿಕೊಡುತ್ತಿದ್ದು ಶಾಲಾ ಆಡಳಿತ ಮಂಡಳಿ, ಪೊಲೀಸರು ಮಾತ್ರ ಜಾಣ ಕುರುಡು ಪ್ರದರ್ಶಿಸಿದ್ದಾರೆ.
ಶಾಲಾ ಮಕ್ಕಳನ್ನು ಆಟೋ ಹಿಂದೆ ಕೂರಿಸಿಕೊಂಡು ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಕರೆದೊಯ್ಯಲಾಗುತ್ತಿದೆ. ತತ್ ಕ್ಷಣ ಬ್ರೇಕ್ ಹಾಕಿದಾಗ ಇಲ್ಲವೇ ರಸ್ತೆಗುಂಡಿಗೆ ಆಟೋ ಇಳಿದಾಗ ಹಿಂದೆ ಕೂರುವ ಮಕ್ಕಳು ಬೀಳುವ ಸಾಧ್ಯತೆ ಹೆಚ್ಚಿದ್ದರೂ, ಶಾಲಾಡಳಿತ ಮಂಡಳಿ ಮತ್ತು ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಕೊಳ್ಳೇಗಾಲದ ನಿವಾಸಿಯೊಬ್ಬರು ಆರೋಪಿಸಿದ್ದಾರೆ.
ಇಂದುವಾಡಿ, ಮಧುವನಹಳ್ಳಿ- ಸತ್ತೇಗಾಲ, ನರೀಪುರ, ಉತ್ತಂಬಳ್ಳಿ,ಕುನಗಹಳ್ಳಿ, ಮುಡುಗಂಡ, ಸಿದ್ದಯ್ಯನಪುರದಿಂದ ಆಟೋಗಳಲ್ಲಿ ಮಕ್ಕಳನ್ನು ಕುರಿಗಳಂತೆ ಕೂರಿಸಿ ಯಾವುದೇ ಸುರಕ್ಷಿತ ಕ್ರಮ ಇಲ್ಲದೇ ಕರೆದೊಯ್ಯುತ್ತಿದ್ದು ಸಂಬಂಧಿಸಿದ ಉನ್ನತಮಟ್ಟ ಅಧಿಕಾರಿಗಳು ಈ ಕುರಿತು ಶೀಘ್ರವೇ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.