ಚಾಮರಾಜನಗರ: ಹಿಜಾಬ್ ವಿವಾದ, ಸಮವಸ್ತ್ರ ನೀತಿ ಸಂಹಿತೆ ಹಗ್ಗ ಹಗ್ಗಾಟದಿಂದ ರಾಜ್ಯದ ಹಲವು ಶಾಲಾ - ಕಾಲೇಜುಗಳಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಮಧ್ಯೆ ಸರ್ಕಾರಿ ಶಾಲೆಯೊಂದು ಕಳೆದ ಐದೂವರೆ ವರ್ಷಗಳಿಂದ ಸಮವಸ್ತ್ರದಿಂದಲೇ ಗಮನ ಸೆಳೆಯುತ್ತಿದೆ.
ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗಷ್ಟೇ ಅಲ್ಲ ಶಿಕ್ಷಕರು, ಅಡುಗೆ ಸಿಬ್ಬಂದಿ, ಎಸ್ಡಿಎಂಸಿ ಸದಸ್ಯರಿಗೂ ಇದೆ ಸಮವಸ್ತ್ರ! ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಷ್ಟೇ ಅಲ್ಲದೇ ಶಿಕ್ಷಕರು, ಬಿಸಿಯೂಟ ಅಡುಗೆ ಸಿಬ್ಬಂದಿ, ಎಸ್ಡಿಎಂಸಿ ಸದಸ್ಯರಿಗೂ ಸಮವಸ್ತ್ರವಿದ್ದು ಇದನ್ನು ಚಾಚು ತಪ್ಪದೇ ಸಂತೋಷದಿಂದ ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ.
ಹೊಂಗಳ್ಳಿ ಶಾಲೆಯಲ್ಲಿ ಒಟ್ಟು 105 ವಿದ್ಯಾರ್ಥಿಗಳಿದ್ದು ಶಾಲೆಯ ಮುಖ್ಯ ಶಿಕ್ಷಕ ಮಹಾದೇಶ್ವರ ಸ್ವಾಮಿ ಪ್ರಯತ್ನದ ಫಲವಾಗಿ ವಿದ್ಯಾರ್ಥಿಗಳಿಗೆ ದಿನಕ್ಕೊಂದು ಸಮವಸ್ತ್ರ, ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕ ವರ್ಗಕ್ಕೆ ದಿನ ಬಿಟ್ಟು ದಿನದಂತೆ ಮೂರು ಮತ್ತು ಎಸ್ಡಿಎಂಸಿ ಸದಸ್ಯರಿಗೆ ಎರಡು ಸಮವಸ್ತ್ರಗಳಿವೆ. ವಿದ್ಯಾರ್ಥಿಗಳಿಗೆ ದಿನಕ್ಕೊಂದು ಬಣ್ಣದ ಸಮವಸ್ತ್ರವಿದ್ದು ಶನಿವಾರ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಬಿಳಿ ಬಣ್ಣದ ಬಟ್ಟೆ ಧರಿಸುವ ಜೊತೆಗೆ ಗಾಂಧಿ ಟೋಪಿ ಧರಿಸುತ್ತಾರೆ.
ಶಿಕ್ಷಕರಿಗೆ ಆಕಾಶ ನೀಲಿ, ಬೂದು ಮತ್ತು ಎಣ್ಣೆಗೆಂಪು ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಇದ್ದು, ಶಿಕ್ಷಕಿಯರು ಎಣ್ಣೆಗೆಂಪು, ಆಕಾಶನೀಲಿ ಮತ್ತು ಹಸಿರು ಬಣ್ಣದ ಸೀರೆ ಉಡಲಿದ್ದಾರೆ. ಬಿಸಿಯೂಟದ ಸಿಬ್ಬಂದಿಗೂ ಮೂರು ಸಮವಸ್ತ್ರವಿದ್ದು ಕೆಂಪು, ನೀಲಿ ಮತ್ತು ಕ್ರೀಂ ಬಣ್ಣದ ಸೀರೆ ಇರಲಿದ್ದು ಎಸ್ಡಿಎಂಸಿ ಸದಸ್ಯರಿಗೆ ಬಿಳಿ ಪಂಚೆ ಶರ್ಟ್ ಜೊತೆ ಎರಡು ಬಣ್ಣದ ಟವೆಲ್ ಇದೆ. ಎಸ್ಡಿಎಂಸಿ ಸದಸ್ಯರು ತಮ್ಮ ಪ್ರಾಥಮಿಕ ಮಾಹಿಯುಳ್ಳ ಗುರುತಿನ ಚೀಟಿಯನ್ನು ಕೊರಳಿಗೆ ಹಾಕಿಕೊಳ್ಳಲಿದ್ದು ಶಿಸ್ತಿನ, ಸಮಾನತೆ, ಸಹೋದರತ್ವ ಸಾರುತ್ತಿದ್ದಾರೆ.
ಶಾಲೆಯ ಕೆಲಸಕ್ಕೆ ಶಿಕ್ಷಕರಿಂದಲೇ ದುಡಿಮೆ: ಶಾಲೆಯಲ್ಲಿ ಕೈಗೊಳ್ಳುವ ಬಹುತೇಕ ಕಾಮಗಾರಿಗಳಿಗೆ ರಜಾ ದಿನಗಳಲ್ಲಿ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ದುಡಿಯಲಿದ್ದು ಇವರುಗಳೇ ಸೇರಿಕೊಂಡು ಕಾಂಪೌಂಡ್, ಶೌಚಾಲಯ ಕಟ್ಟಡಗಳನ್ನು ಕಟ್ಟಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಶಿಕ್ಷಕ ಮಹಾದೇಶ್ವರಸ್ವಾಮಿ ನಿತ್ಯ 40 ಕಿಮೀ ಸಂಚರಿಸಿ ಶಾಲೆಯ ಗಿಡಗಳಿಗೆ ನೀರುಣಿಸಿ ಮಕ್ಕಳು ಬೆಳೆಸಿದ ಗಿಡ, ಪರಿಸರ ಹಾಳಗಾದಂತೆ ನೋಡಿಕೊಳ್ಳುವ ಮೂಲಕ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು.
ಇದನ್ನೂ ಓದಿ:ಹಿಜಾಬ್ - ಕೇಸರಿ ವಿವಾದ: ಶೇ 50ರಷ್ಟು ವಿದ್ಯಾರ್ಥಿನಿಯರು ಗೈರು