ಚಾಮರಾಜನಗರ: ಕಾಲ ಮಿತಿಯೊಳಗೆ ಮಾಹಿತಿ ನೀಡದ ಕೊಳ್ಳೇಗಾಲ ತಹಶೀಲ್ದಾರ್ ಎಂ ಮಂಜುಳಾ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ 25 ಸಾವಿರ ದಂಡ್ನು ವಿಧಿಸಿ ಆದೇಶಿಸಿದೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಕೆ ಎಲ್ ಲಿಂಗರಾಜು ಅವರ ದೂರಿನ ಮೇರೆಗೆ ರಾಜ್ಯ ಮಾಹಿತಿ ಆಯುಕ್ತ ಎಚ್ ಸಿ ಸತ್ಯನ್ ತೆರೆದ ನ್ಯಾಯಾಲಯದಲ್ಲಿ ದಂಡ ವಿಧಿಸಿದ್ದಾರೆ.
ಏನಿದು ಪ್ರಕರಣ:ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ನಿವಾಸಿ ಕೆ ಎಲ್ ಲಿಂಗರಾಜು ಎಂಬುವರು 2022ರ ಜ.1 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ತಹಶೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದರು. ಕುಣಗಳ್ಳಿ ಗ್ರಾಮದ ಸರ್ವೇ ನಂ.785ರಲ್ಲಿ ವಿಸ್ತೀರ್ಣ 4 ಎಕರೆ 76 ಸೆಂಟು ಇದರ ಖಾತೆ ಆದೇಶ ಸಂಖ್ಯೆ ಕ.ಅ.16/16-17 ಕೋರ್ಟು ಆದೇಶ ದಿ.27.06.2016 ನೇ ಸಾಲು ವಹಿವಾಟು ಸಂಖ್ಯೆ 194ಎಂ.ಆರ್. ನಂಬರ್ ಎಚ್.90 ಇದರ ತಹಶೀಲ್ದಾರ್ ಆದೇಶ ಜೆರಾಕ್ಸ್ ಪ್ರತಿಗಳು ಮತ್ತು ಕಮಲಮ್ಮ, ಚೆನ್ನಶೆಟ್ಟಿ, ಫ್ರಂಕು ಲೂಯಿಸ್, ಇವರುಗಳು ತಹಶೀಲ್ದಾರ್ ಕೋರ್ಟಿಗೆ ಸಲ್ಲಿಸಿದ್ದ ಪ್ರತಿ ಒಂದು ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ದೃಢಿಕರಿಸಿಕೊಡಲು ಕೋರಿದ್ದರು.
ತಹಶೀಲ್ದಾರ್ಗೆ ದಂಡ ವಿಧಿಸಿದ ಆಯೋಗ: ಆದರೆ, ಇದಕ್ಕೆ ತಹಶೀಲ್ದಾರ್ ಸಕಾಲಕ್ಕೆ ಮಾಹಿತಿ ನೀಡದ ಹಿನ್ನೆಲೆ ಅರ್ಜಿದಾರರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪರಿಣಾಮ ರಾಜ್ಯ ಮಾಹಿತಿ ಹಕ್ಕಿನ ಆಯೋಗವು ತಹಶೀಲ್ದಾರ್ ಮಂಜುಳಾ ಅವರಿಗೆ ದಂಡ ವಿಧಿಸಿದೆ. ದಂಡದ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿಸುವಲ್ಲಿ ಸೂಕ್ತ ಕ್ರಮವಹಿಸುವಂತೆ ಉಪವಿಭಾಗಧಿಕಾರಿ ಗೀತಾ ಹುಡೇದ ಅವರಿಗೆ ಸೂಚಿಸಿದೆ.