ಚಾಮರಾಜನಗರ : ರಾಜ್ಯದಲ್ಲೇ ಆಷಾಢ ಮಾಸದಲ್ಲಿ ನಡೆಯುವ ಏಕೈಕ ರಥೋತ್ಸವವಾದ ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಇಂದು ವಿಜೃಂಭಣೆಯಿಂದ ಜರುಗಿತು. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಹಬ್ಬ ಹರಿದಿನಗಳು ಹಾಗು ಶುಭ ಕಾರ್ಯಗಳು ನಡೆಯುವುದಿಲ್ಲ. ಆದರೂ ಈ ಸಂದರ್ಭದಲ್ಲಿ ಜರುಗುವ ಏಕೈಕ ರಥೋತ್ಸವವು ಇದಾಗಿದ್ದು, ನವಜೋಡಿಗಳ ಜಾತ್ರೆ ಎಂಥಲೇ ಖ್ಯಾತಿ ಪಡೆದಿದೆ.
ಇಂದು ಪೂರ್ವಾಷಾಢ ನಕ್ಷತ್ರದ ಮಧ್ಯಾಹ್ನ 12 ರಿಂದ 1ರ ವರೆಗೆ ಶುಭ ಕನ್ಯಾ ಲಗ್ನದಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಹರ್ಷೋದ್ಗಾರದ ಹಾಕುತ್ತ ರಥ ಬೀದಿಯಲ್ಲಿ ತೇರನ್ನು ಎಳೆದರು.
ಹಣ್ಣು ದವನ ಎಸೆದ ನವ ದಂಪತಿಗಳು :ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳು ಪ್ರಥಮ ಆಷಾಢ ಮಾಸದಲ್ಲಿ ಪರಸ್ಪರ ದೂರ ಇರುವುದು ವಾಡಿಕೆ. ಇದರಿಂದ ಅವರು ಪರಸ್ಪರ ಮುಖಾಮುಖಿ ಭೇಟಿಯಾಗಲು ಆಗುವುದಿಲ್ಲ. ಆದರೇ ನವಜೋಡಿಗಳಿಗೆ ಪರಸ್ಪರ ಭೇಟಿಯಾಗಲು ಅಪೂರ್ವ ಸದಾವಕಾಶವನ್ನು ಈ ಜಾತ್ರೆ ಕಲ್ಪಿಸುವುದರಿಂದ ಜಾತ್ರೆಯಲ್ಲಿ ನವದಂಪತಿಗಳ ಕಲರವ ಹೆಚ್ಚಿರುವುದು ಈ ರಥೋತ್ಸವದ ವಿಶೇಷತೆ ಅಂತಾ ಹೇಳಲಾಗುತ್ತದೆ.
ರಥೋತ್ಸವಕ್ಕೆ ಬರುವ ನವದಂಪತಿಗಳು ತಮ್ಮ ತಮ್ಮ ಊರಿನಿಂದ ಬೇರೆ ಬೇರೆಯಾಗಿ ಬಂದು ಇಲ್ಲಿನ ನೆಂಟರಿಷ್ಟರ ಮನೆಯಲ್ಲಿ ಅಥವಾ ಪ್ರತ್ಯೇಕವಾಗಿ ಭೇಟಿಯಾಗುತ್ತಾರೆ. ಬಳಿಕ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹಣ್ಣು ಧವನ ಎಸೆಯುತ್ತಾ, ಕೈ ಕೈ ಹಿಡಿದುಕೊಂಡು ಸಂಭ್ರಮದಿಂದ ಓಡಾಡಿದರು.
ಹಾಗು ನವದಂಪತಿಗಳು ಬಂದು ರಥಕ್ಕೆ ಹಣ್ಣು-ದವನ ಎಸೆದರೆ ಸಂತಾನ ಭಾಗ್ಯ ಹಾಗೂ ಸುಖ ಸಂಸಾರ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.