ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದರು. ಚಾಮರಾಜನಗರ: ರಾಜ್ಯದ ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳಷ್ಟು ಲೂಟಿ ಮಾಡಿದೆ. ರಾಜ್ಯದ ಜನರ ಹಣ ಮಂತ್ರಿಗಳು, ನಾಯಕರ ಮನೆ ಸೇರಿದೆ. ಜನರು ಇಟ್ಟಿದ್ದ ವಿಶ್ವಾಸ, ನಂಬಿಕೆಗೆ ಬಿಜೆಪಿ ದ್ರೋಹ ಬಗೆದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗರೆದರು.
ಇಂದು ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದೂವರೆ ಲಕ್ಷ ಕೋಟಿ ರೂಪಾಯಿಗಳು ನನ್ನ ಬಳಿ ಇದ್ದಿದ್ದರೇ 100 ಏಮ್ಸ್ ಆಸ್ಪತ್ರೆ, 177 ಇಎಸ್ಐ ಆಸ್ಪತ್ರೆ, 30 ಸಾವಿರ ಸ್ಮಾರ್ಟ್ ಕ್ಲಾಸ್, 750 ಕಿ. ಮೀ ಮೆಟ್ರೊ, 2250 ಕಿ. ಮೀ. ಎಕ್ಸ್ ಪ್ರೆಸ್ ವೇ, 30 ಲಕ್ಷ ಮನೆಗಳನ್ನು ನಿರ್ಮಾಣ ಮಾಡಬಹುದಿತ್ತು. ಆದರೆ ಇಂದು ಆ ಹಣ ಏನಾಗಿದೆ? ಬಿಜೆಪಿ ನಾಯಕರು ಮನೆಯಲ್ಲಿದೆ ಎಂದು ದೂರಿದರು.
ಬಿಜೆಪಿಯವರು ಚುನಾವಣೆಗೆ ಮುನ್ನ ಒಂದು ಮಾತು ಆಡುತ್ತಾರೆ. ಅದಾದ ಬಳಿಕ ಮರೆಯುತ್ತಾರೆ, ನೂರಾರು ಭರವಸೆ ಕೊಟ್ಟ ಬಿಜೆಪಿ ನಿಮ್ಮ ವಿಶ್ವಾಸ ಉಳಿಸಿಕೊಂಡಿದೆಯ..? ದಿನಬಳಕೆ ವಸ್ತುಗಳ ಬೆಲೆ ಕಡಿಮೆ ಆಗಿದ್ಯಾ..? ನಿಮ್ಮ ಮನೆ ಮುಂದೆ ಉತ್ತಮ ರಸ್ತೆ ಇದೆಯಾ..? ನಿಮಗೆ ಉತ್ತಮ ಆಸ್ಪತ್ರೆ ಸಿಕ್ಕಿದೆಯಾ..? ಎಂದು ಪ್ರಶ್ನಿಸಿ ಮಹಿಳೆಯರ ಮನಗೆಲ್ಲುವ ಪ್ರಯತ್ನ ಮಾಡಿದರು.
ಜನರು ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದರು. ಜನರ ನಂಬಿಕೆಯನ್ನು ಇಂದಿರಾ ಗಾಂಧಿ, ರಾಜೀವ್, ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿತ್ತು. ಆದರೆ ಈಗಿನ ನೇತಾರರು ನಿಮ್ಮ ನಂಬಿಕೆ ಉಳಿಸಿಕೊಂಡಿದ್ದಾರಾ..? ಯಾವ ಪಕ್ಷದಲ್ಲಿ ನಂಬಿಕೆ ಇಡಬೇಕೆಂದು ಯೋಚಿಸಿ ಮತ ಕೊಡಿ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ ಕೊಡಿ ಎಂದು ಮನವಿ ಮಾಡಿದರು.
ಮೋದಿ ವಿರುದ್ಧ ವಾಗ್ದಾಳಿ: ದೇಶದ ಪ್ರಧಾನಮಂತ್ರಿ ಅವರಿಗೆ ಒಬ್ಬರು ಸ್ನೇಹಿತರಿದ್ದಾರೆ- ಅವರ ಹೆಸರು ಅದಾನಿ, ದೇಶದ ರೈತ ದಿನಕ್ಕೆ 27 ರೂ ಸಂಪಾದಿಸುತ್ತಾನೆ. ಆದರೆ ಪ್ರಧಾನಿ ಸ್ನೇಹಿತ ಲಕ್ಷ ಕೋಟಿ ದುಡಿಯುತ್ತಿದ್ದಾರೆ. ನೀವು ನಂಬಿಕೆ ಇಟ್ಟು ವೋಟ್ ಹಾಕಿದಿರಿ, ಗೆಲ್ಲಿಸಿದರಿ ಆದರೆ ಏನಾಯಿತು..? ನಿಮ್ಮ ನಂಬಿಕೆ ಉಳಿಸಿಕೊಂಡಿದ್ದಾರಾ ಎಂದು ಪ್ರಶ್ನೆ ಮಾಡಿದರು.
ನಂದಿನಿ ಅಮುಲ್ ವಿಲೀನವಾದ್ರೆ ರೈತರು ದಿವಾಳಿ : ಡಬಲ್ ಎಂಜಿನ್ ಸರ್ಕಾರ ಎಂದುಕೊಂಡ ಬಂದ ಬಿಜೆಪಿ ಸರ್ಕಾರ ಕರ್ನಾಟಕ, ಕನ್ನಡ ಸ್ವಾಭಿಮಾನ, ಸಂಸ್ಕೃತಿಯನ್ನು ಅವಮಾನಿಸುವ ಕೆಲಸ ಮಾಡುತ್ತಿದೆ. ನಮ್ಮ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಬೇರೆ ಬ್ರ್ಯಾಂಡ್ ಜೊತೆ ವಿಲೀನ ಮಾಡುವ ಸಂಚು ರೂಪಿಸಿದ್ದಾರೆ. ಇಲ್ಲಿನ ರೈತರನ್ನು ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಪ್ರಿಯಾಂಕಾ ಗಂಭೀರ ಆರೋಪ ಮಾಡಿದರು.
ನಂದಿನಿಗೆ ಬೇರೆ ಬ್ರ್ಯಾಡ್ ವಿಲೀನ ಏಕೆ ಎಂದರೆ ಹಾಲು ಕಡಿಮೆ ಉತ್ಪಾದನೆ ಆಗುತ್ತಿದೆ ಎನ್ನುತ್ತಾರೆ. ಆದರೆ, ಹಾಲಿನ ಹೆಚ್ಚು ಉತ್ಪಾದನೆ ಆಗುತ್ತಿದ್ದರಿಂದ ನಮ್ಮ ಸರ್ಕಾರದಲ್ಲಿ ಕ್ಷೀರಭಾಗ್ಯದ ಮೂಲಕ ಮಕ್ಕಳಿಗೆ ಕೆನೆಭರಿತ ಹಾಲು ಕೊಡುತ್ತಿರಲಿಲ್ಲವೇ..? ಆಗ ಕಡಿಮೆಯಾಗದ ಹಾಲು ಈಗ ಏಕೆ ಕಡಿಮೆಯಾಗುತ್ತದೆ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಸರ್ಕಾರ ಸ್ವಾರ್ಥಕ್ಕಾಗಿ ಜನರನ್ನು ನಂಬಿಸಿ ದಿಕ್ಕು ತಪ್ಪಿಸುತ್ತಿದೆ, ಆಶ್ವಾಸನೆ ಈಡೇರಿಸಿಲ್ಲ, ಉದ್ಯೋಗ ಭರವಸೆ ಈಡೇರಿಲ್ಲ, ಲಕ್ಷಗಟ್ಟಲೆ ಕೆಲಸ ಖಾಲಿ ಇದೆ, ಎಲ್ಲವೂ 40% ಕಾಮಗಾರಿಗಳಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಭರವಸೆ ನೀಡಿದ ಪ್ರಿಯಾಂಕಾ: ನಾವು ನುಡಿದಂತೆ ನಡೆಯುತ್ತೇವೆ. ನೀವು ಕೊಟ್ಟ ಮತದ ಋಣ ತೀರಿಸಿದ್ದೇವೆ. ಅಧಿಕಾರದ ಹಕ್ಕನ್ನು ನಿಮಗೆ ಕೊಟ್ಟಿದ್ದೇವೆ. ಕಾಂಗ್ರೆಸ್ ಅಂದರೆ 100% ರಷ್ಟು ವಿಕಾಸ, ಅಭಿವೃದ್ಧಿ ಮಾಡುತ್ತೇವೆ. ಖಾಲಿ ಇರುವ ಉದ್ಯೋಗಳನ್ನು ತುಂಬುತ್ತೇವೆ. ನಂದಿನಿ ಸಂಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ. ಮನೆ ಒಡತಿಗೆ ₹ 2000, ನಿರುದ್ಯೋಗಿ ಯುವಕರಿಗೆ 1500-3000 ಭತ್ಯೆ, 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ. ಈಗಾಗಲೇ, ರಾಜಾಸ್ಥಾನ, ಚತ್ತೀಸಗಢ, ಹಿಮಾಚಲ ಪ್ರದೇಶದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಮಹಿಳೆಯರ ಜತೆ ಪ್ರಿಯಾಂಕಾ ಸಂವಾದ:ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಹಿಳೆಯರ ಮತಬೇಟೆ ನಡೆಸಿದರು.
ಸಂವಾದದಲ್ಲಿ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟ ಗ್ರಾ.ಪಂ ವ್ಯಾಪ್ತಿಯ ಕೊಕ್ಕಬೊರೆ ಗ್ರಾಮದ ಬೊಮ್ಮಮ್ಮ ಮಾತನಾಡಿ, ನಮಗೇ ಇಷ್ಟು ವರ್ಷಗಳಾದರೂ ವಿದ್ಯುತ್ ಇಲ್ಲಾ. ರಸ್ತೆಯೂ ಇಲ್ಲಾ, ಮನೆಗಳು ಇಲ್ಲಾ, ಸೂಕ್ತ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ, ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಬರಲಿದೆ, ಎಲ್ಲ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.
ಇಂದಿರಾ ಪ್ರತಿರೂಪ ಎಂದ ತಿರುಮಮ್ಮಗೆ ಅಪ್ಪುಗೆ: ಹನೂರು ತಾಲೂಕಿನ ಹೊಸಪೋಡು ಗ್ರಾಮದ ತಿರುಮಮ್ಮ ಮಾತನಾಡಿ, ಇಂದಿರಾ ಗಾಂಧಿ ಅವರ ಕಾಲದಲ್ಲಿ ನಮಗೆ ಸೌಲಭ್ಯಗಳು ಸಿಕ್ಕಿದ್ದವು. ನೀವು ಇಂದಿರಾ ಪ್ರತಿರೂಪದಂತೆ ಇದ್ದೀರಿ. ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಎಂದು ಹೇಳಿದ್ದಕ್ಕೆ ವೇದಿಕೆಯಿಂದ ಕೆಳಗಿಳಿದು ಬಂದು ತಿರುಮಮ್ಮ ಅವರನ್ನು ಪ್ರಿಯಾಂಕಾ ಅಪ್ಪಿಕೊಂಡರು.
ಭದ್ರತೆ ಬಿಟ್ಟು ಜನರ ಬಳಿ ಬಂದ ಪ್ರಿಯಾಂಕಾ: ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಕಾರಿನಿಂದ ಇಳಿದು ಜನರ ಬಳಿ ತೆರಳಿದ ಪ್ರಿಯಾಂಕಾ ಗಾಂಧಿ ಹಸ್ತಲಾಘವ ಕೊಟ್ಟು, ನಮಸ್ಕಾರ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲೂ ವೇದಿಕೆಯಿಂದ ಇಳಿದು ಜನರ ಬಳಿ ಮಿಂಚಿನ ಸಂಚಾರ ನಡೆಸಿ ಗಮನ ಸೆಳೆದರು.
ಇದನ್ನೂಓದಿ:ಖರ್ಗೆ ತವರಿನಲ್ಲಿ ಕೈ ಕಟ್ಟಿಹಾಕಲು ಬಿಜೆಪಿ ರಣತಂತ್ರ: ಇಂದು ಕಲಬುರಗಿಗೆ ಅಮಿತ್ ಶಾ ಎಂಟ್ರಿ, ಮಹತ್ವದ ಸಭೆ
ಪ್ರಿಯಾಂಕಾ ಗಾಂಧಿ ಪ್ರಯಾಣಿಸುವ ಹೆಲಿಕಾಪ್ಟರ್ ತಪಾಸಣೆ:ಚುನಾವಣೆಯಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಪಾಲನೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಯಾಣಿಸುವ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ಮಾಡಿದರು. ಹೆಲಿಕಾಪ್ಟರ್ನಲ್ಲಿದ್ದ ಬ್ಯಾಗ್, ಚಾಕೊಲೆಟ್ ಬಾಕ್ಸ್, ಊಟದ ಬಾಕ್ಸ್ಗಳನ್ನು ಪರಿಶೀಲಿಸಿ ಬಳಿಕ ಪ್ರಿಯಾಂಕ ಗಾಂಧಿ ಪ್ರಯಾಣಿಸಲು ಅನುವು ಮಾಡಿಕೊಟ್ಟರು.