ಕರ್ನಾಟಕ

karnataka

ETV Bharat / state

ಬಿಎಸ್​​​​ವೈ- ಸೋಮಣ್ಣ ಮುನಿಸು ಶಮನಕ್ಕೆ ಮಾದಪ್ಪನ ಬೆಟ್ಟದಲ್ಲಿ ವೇದಿಕೆ ಸಿದ್ಧ! - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತಮ್ಮ ಮಕ್ಕಳಿಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ನೀಡುವ ವಿಚಾರದಲ್ಲಿ ಇಬ್ಬರು ಮಧ್ಯೆ ಅಸಮಾಧಾನದ ಗುಲ್ಲೆದ್ದಿತ್ತು.

B S Y and Somanna
ಬಿ ಎಸ್​ ವೈ ಹಾಗೂ ಸೋಮಣ್ಣ

By

Published : Mar 16, 2023, 8:21 PM IST

ಚಾಮರಾಜನಗರ: ಕಳೆದ ಹಲವಾರು ದಿನಗಳಿಂದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಸಚಿವ ವಿ ಸೋಮಣ್ಣ ಅವರ ಮುನಿಸು ಒಂದು ಮಟ್ಟಿಗೆ ಶಮನಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹಾಗೂ ಸಚಿವ ಸೋಮಣ್ಣ ಒಂದಾಗಿ ಒಗ್ಗಟ್ಟಿನ ಮಂತ್ರ ಪಠಿಸಲು ಮಲೆ ಮಹದೇಶ್ವರ ಬೆಟ್ಟದಲ್ಲಿ ವೇದಿಕೆ ಸಿದ್ಧವಾಗಿದೆ.

ಹೌದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟದಲ್ಲಿ 18 ರಂದು ನಡೆಯುವ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಯಡಿಯೂರಪ್ಪ ಹೆಸರು ಕಾಣಿಸಿಕೊಂಡಿದ್ದು, ಬಿ ಎಸ್​ ಯಡಿಯೂರಪ್ಪ ಹಾಗೂ ಸೋಮಣ್ಣ ಮುನಿಸು ಶಮನಕ್ಕೆ ಈ ಕಾರ್ಯಕ್ರಮ ವೇದಿಕೆ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಿಷ್ಟಾಚಾರ ಪ್ರಕಾರ ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರದಲ್ಲಿರುವವರ ಹೆಸರಷ್ಟೇ ಹಾಕಿಸಬೇಕು. ಆದರೆ, ಬಿ.ಎಸ್‌. ಯಡಿಯೂರಪ್ಪ ಹೆಸರು ಆಹ್ವಾನ ಪತ್ರಿಕೆಯಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಲು ಬಿಜೆಪಿ ವರಿಷ್ಠರು ಮಾದಪ್ಪನ ಬೆಟ್ಟದಲ್ಲಿ ಈ ವೇದಿಕೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ಮಾರ್ಚ್​ 1 ರಂದು ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಗೊಂಡ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಬಂದು ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್​ ಕುಮಾರ್​ ಕಟೀಲ್​, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರೂ ಭಾಗವಹಿಸಿದ್ದರು. ಆದರೆ ವಿಜಯ ಸಂಕಲ್ಪ ಯಾತ್ರೆ ಚಾಲನೆಗೆ ಚಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರೇ ಆಗಿರುವ ಸೋಮಣ್ಣ ಗೈರಾಗಿದ್ದರು.

ಅದಾಗಲೇ ವಿರೋಧ ಪಕ್ಷಗಳು ಬಿಜೆಪಿಯಲ್ಲಿ ಭಿನ್ನಮತವಿದೆ. ಪಕ್ಷದ ಒಳಗೆಯೇ ಅಸಮಾಧನವಿದೆ ಎಂದು ಹೇಳಿಕೆಗಳನ್ನು ನೀಡಿದ್ದರು. ಅವರ ಮಾತುಗಳಿಗೆ ಕನ್ನಡಿ ಹಿಡಿಯುವಂತೆ ಸಚಿವ ಸೋಮಣ್ಣ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುದಾನ ಕೊಟ್ಟಿಲ್ಲ, ಜೊತೆಗೆ ಬೇರೆ ಬೇರೆ ಕಾರಣಗಳಿಂದ ತಮ್ಮ ಪಕ್ಷದ ವಿರುದ್ಧವೇ ಸಚಿವ ಸೋಮಣ್ಣ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು.

ನಂತರದಲ್ಲಿ ಇದೇ ವಿಷಯವನ್ನು ದಾಳವಾಗಿ ಬಳಸಿಕೊಂಡ ವಿಪಕ್ಷ ನಾಯಕರು ಸಚಿವ ಸೋಮಣ್ಣ ಅವರು ಬಿಜೆಪಿಯನ್ನು ತೊರೆಯುತ್ತಾರೆ ಎಂದು ಹೇಳಿದ್ದರು. ಬಿಜೆಪಿ ತೊರೆದು ಕಾಂಗ್ರೆಸ್​ಗೆ ಸೇರ್ಪಡೆಗೊಳ್ಳುತ್ತಾರೆ ಎನ್ನುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಈ ಕುರಿತು ಬಿಜೆಪಿ ನಾಯಕರು ಸಚಿವ ಸೋಮಣ್ಣ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ ಎನ್ನುವ ಸ್ಪಷ್ಟನೆ ಕೊಟ್ಟಿದ್ದರು. ಇದರ ಮಧ್ಯದಲ್ಲೇ ಬಿ ಎಸ್​ ಯಡಿಯೂರಪ್ಪ ಕೆಲವು ಹಾಲಿ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ಕೈತಪ್ಪಬಹುದು ಎಂದು ಹೇಳಿದ್ದರು.

ಇದರ ಜೊತೆಗೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ತಮ್ಮ ಮಗನಿಗೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್​ ನೀಡಬೇಕು ಎಂದು ಸಚಿವ ಸೋಮಣ್ಣ ಬಿಜೆಪಿ ಪಕ್ಷದ ವರಿಷ್ಠರಲ್ಲಿ ಕೇಳಿದ್ದಾರೆ. ಆದರೆ ಸೋಮಣ್ಣ ಅವರ ಮಗನಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್​ ಸಿಗುವುದು ಅನುಮಾನವಾಗಿರುವುದರಿಂದ ಕಾಂಗ್ರೆಸ್​ ಸೇರಲು ಮುಂದಾಗಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡಿತ್ತು.

ಅದರ ಜೊತೆಗೆ ಬಿಎಸ್​ ಯಡಿಯೂರಪ್ಪ ಅವರ ಮಗ, ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿರುವ ವಿಜಯೇಂದ್ರ ಅವರಿಗೆ ಪಕ್ಷ ಈ ಬಾರಿ ಚುನಾವಣೆಗ ಟಿಕೆಟ್​ ನೀಡುತ್ತದೆ ಎಂಬ ಮಾತೂ ಇದೆ. ಹೀಗಾಗಿ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಎನ್ನುವ ನಿಯಮ ನನಗೆ ಅನ್ವಯಿಸುತ್ತದೆಯಾದರೆ, ಇತರರಿಗೂ ಅನ್ವಯಿಸಬೇಕು. ಬೇರೆ ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್​ ಇಲ್ಲವಾದರೆ ನಮಗೂ ಬೇಡ ಎಂದು ಸೂಚ್ಯವಾಗಿ ಹೇಳಿ, ಬಿಎಸ್​ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ರಾಜ್ಯದೆಲ್ಲೆಡೆ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದ್ದರೂ, ತಮ್ಮ ಜಿಲ್ಲೆಯಲ್ಲೇ ನಡೆಯುತ್ತಿದ್ದರೂ ಅದ್ಯಾವುದರಲ್ಲೂ ಭಾಗವಹಿಸದೆ ಪಕ್ಷದ ಕಾರ್ಯಕ್ರಮಗಳಿಂದ ಸಚಿವ ಸೋಮಣ್ಣ ಅಮತರ ಕಾಯ್ದುಕೊಂಡಿದ್ದರು. ಮೊದಲ ಬಾರಿಗೆ ಬಿಎಸ್​ವೈ ವಿರುದ್ಧ ಅಸಮಾಧಾನ ಹೊರಹಾಕಿದ್ದ ಸೋಮಣ್ಣ ನಿನ್ನೆ ದೆಹಲಿಗೆ ಪಯಣ ಬೆಳೆಸಿ ಹೈಕಮಾಂಡ್​ ನಾಯಕರನ್ನು ನೇರವಾಗಿ ಭೇಟಿ ಮಾಡಿ ಬಂದಿದ್ದರು. ಭೇಟಿ ಮಾಡಿ ಬಂದು ಇಂದು ಸುದ್ದಿಗೋಷ್ಠಿ ನಡೆಸಿದ ಸೋಮಣ್ಣ, ಹೈಕಮಾಂಡ್​ ನಾಯಕರು ನಮ್ಮಲ್ಲಿನ ಗೊಂದಲಗಳನ್ನು ನಿವಾರಿಸಿದ್ದಾರೆ. ಬಿ ಎಸ್​ ಯಡಿಯೂರಪ್ಪ ಪ್ರಶ್ನಾತೀತಾ ನಾಯಕರು, ನಾನೂ ಕೂಡ ಯಡಿಯೂರಪ್ಪ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ಅವರು ನನಗೆ ತಂದೆ ಸಮಾನರು ಎಂದು ಹೇಳಿದ್ದರು.

ಗೊಂದಲ ನಿವಾರಿಸಿಕೊಂಡು ಬಂದಿರುವ ಸಚಿವ ಸೋಮಣ್ಣ ಹಾಗೂ ಬಿ ಎಸ್​ ಯಡಿಯೂರಪ್ಪ ಅವರ ನಡುವಿನ ಒಗ್ಗಟ್ಟಿನ ಮಂತ್ರ ಪಠಿಸಲು ಮಲೆಮಹದೇಶ್ಚರ ಬೆಟ್ಟದಿಂದ ಲಿಂಗಾಯತ ಸಮುದಾಯದ ಪ್ರಬಲ ನಾಯಕರು ಮುಂದಾಗಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿ ನಡೆಯುವ ಈ ಕಾರ್ಯಕ್ರಮ ಬಿಜೆಪಿ ಪಾಲಿಗಂತೂ ಪ್ಲಸ್ ಆಗಲಿದೆ.

ಇದನ್ನೂ ಓದಿ:ಬಿಎಸ್​ವೈ ನಮ್ಮ ಪ್ರಶ್ನಾತೀತ ನಾಯಕ, ಗೊಂದಲ ಪರಿಹಾರವಾಗಿದೆ: ಸಚಿವ ಸೋಮಣ್ಣ

ABOUT THE AUTHOR

...view details