ಚಾಮರಾಜನಗರ: ನಿತ್ಯ ಏರಿಕೆ ಕಾಣುತ್ತಿರುವ ಕೊರೊನಾ ಪ್ರಕರಣಗಳ ನಡುವೆ ಕೆಲ ವೈದ್ಯಕೀಯ ಸಿಬ್ಬಂದಿ ತೋರುತ್ತಿರುವ ಅಚಾತುರ್ಯ ಹಾಗೂ ನಿರ್ಲಕ್ಷ್ಯದಿಂದ ಮಹಾಮಾರಿಗೆ ಕಡಿವಾಣ ಹಾಕದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಸೋಂಕಿತ ವ್ಯಕ್ತಿಯನ್ನೇ ಮಾತ್ರೆಗಾಗಿ ಆಸ್ಪತ್ರೆಗೆ ಕರೆಸಿಕೊಂಡಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ನಗರದ ಬಣಜಿಗರ ಬೀದಿಯಲ್ಲಿ ವಾಸಿಸುವ ಕುಟುಂಬದ ಮೂವರಿಗೆ ಕೊರೊನಾ ಸೋಂಕು ತಗುಲಿದೆ. ಹೋಂ ಐಸೋಲೇಷನ್ನಲ್ಲಿರುವ ಇವರಿಗೆ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ ಮಾತ್ರೆಗಳನ್ನು ತೆಗೆದುಕೊಂಡು ಹೋಗಿ ಎಂದಿದ್ದಾರೆ. ತಾನು ಹೋಂ ಐಸೋಲೇಷನ್ನಲ್ಲಿದ್ದೇನೆ ಎಂದರೂ ಮಾತ್ರೆ ಬೇಕೆಂದರೆ ಬನ್ನಿ ಎಂದು ಬೇಜವಾಬ್ದಾರಿ ಮಾತುಗಳನ್ನು ಆಡಿದ್ದಾರೆ. ಕೊನೆಗೆ ಅನಿವಾರ್ಯವಾಗಿ ಸೋಂಕಿತ ವ್ಯಕ್ತಿಯೇ ಆಸ್ಪತ್ರೆಗೆ ತೆರಳಿ ಮಾತ್ರೆ ತೆಗೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.