ಚಾಮರಾಜನಗರ :ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಸುಸೂತ್ರವಾಗಿ ನಡೆದಿದೆ. ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್, ಬುರ್ಕಾ ತೆರೆದಿಟ್ಟು ಪರೀಕ್ಷೆಗೆ ಹಾಜರಾದರು. ನಗರದ ಬಾಲಕರ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಧರಿಸಿ ನಾಲ್ವರು ವಿದ್ಯಾರ್ಥಿನಿಯರು ಬಂದಿದ್ದರು.
ಆಗ ಶಿಕ್ಷಕರು ಕೇಂದ್ರದೊಳಗಡೆ ಹಿಜಾಬ್ ಬೇಡ. ಪರೀಕ್ಷೆ ಬಳಿಕ ಹಿಜಾಬ್ ಧರಿಸಿಕೊಳ್ಳಿ ಎಂದು ಮನವೊಲಿಸಿದರು. ಅದರಂತೆ, ವಿದ್ಯಾರ್ಥಿನಿಯರು ಹಿಜಾಬ್ ತೆರೆದಿಟ್ಟು ಪರೀಕ್ಷೆ ಬರೆಯಲು ಆರಂಭಿಸಿದರು. ಇತರ ಕೆಲ ಕಡೆಗಳಲ್ಲಿ ವಿದ್ಯಾರ್ಥಿನಿಯರು ಶಾಲಾ ಆವರಣದ ತನಕ ಹಿಜಾಬ್, ಬುರ್ಕಾ ಧರಿಸಿ ಬಂದರು. ನಂತರ ಸ್ವಯಂ ಪ್ರೇರಣೆಯಿಂದ ಪರೀಕ್ಷಾ ಕೇಂದ್ರದೊಳಗೆ ಹಿಜಾಬ್ ಹಾಗೂ ಬುರ್ಕಾ ತೆರೆದಿಟ್ಟು ಶಾಲಾ ಸಮವಸ್ತ್ರದಲ್ಲಿ ಪರೀಕ್ಷೆಗೆ ಹಾಜರಾದರು.
ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ 12,271 ಮಂದಿ ಪರೀಕ್ಷಾರ್ಥಿಗಳಿದ್ದಾರೆ. ಕಾಯ್ದಿರಿಸಿದ 5 ಪರೀಕ್ಷಾ ಕೇಂದ್ರವನ್ನು ಸೇರಿದಂತೆ ಒಟ್ಟು 63 ಕೇಂದ್ರಗಳನ್ನು ನಿಗದಿ ಮಾಡಲಾಗಿದೆ. ಚಾಮರಾಜನಗರ ತಾಲೂಕು-23, ಗುಂಡ್ಲುಪೇಟೆ-12, ಕೊಳ್ಳೇಗಾಲ-13, ಹನೂರು-10 ಹಾಗೂ ಯಳಂದೂರಿನಲ್ಲಿ 4 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ ಎಂದರು.