ಚಾಮರಾಜನಗರ: ಇಂದು ಕೊನೆಯ ಕಾರ್ತಿಕ ಸೋಮವಾರ ಹಿನ್ನೆಲೆ ಪ್ರಸಿದ್ಧ ಯಾತ್ರಾಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಇಂದು ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ತೆಪ್ಪೋತ್ಸವಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಉಳಿದಂತೆ ದೀಪದಗಿರಿ ಒಡ್ಡುವಿನಲ್ಲಿ ಮಹಾಜ್ಯೋತಿ ಬೆಳಗುವ ಕಾರ್ಯಕ್ರಮ ಮಾತ್ರ ನಡೆಸಲು ನಿರ್ಧರಿಸಲಾಗಿದೆ.
ಕಾರ್ತಿಕ ಮಾಸದಲ್ಲಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿ ಮಹದೇಶ್ವರನ ದರ್ಶನ ಪಡೆಯುತ್ತಾರೆ. ಕೋವಿಡ್ ಕಾರಣಕ್ಕೆ ಕಳೆದ ವರ್ಷ ಜಾತ್ರೆ ಸರಳವಾಗಿ ನಡೆದಿತ್ತು. ದಸರಾ ಬಳಿಕ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಕಾರ್ತಿಕ ಸೋಮವಾರವಾದ ಇಂದು ಭಕ್ತರ ದಂಡು ಹರಿದುಬಂದಿದೆ.
ಕಾರ್ತಿಕ ಮಾಸದ ವಿಶೇಷ ಪೂಜೆ ಹಾಗೂ ದೀಪೋತ್ಸವಕ್ಕಾಗಿ ಪ್ರಾಧಿಕಾರವು ವಿಶೇಷ ಸಿದ್ಧತೆ ಮಾಡಿದೆ. ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿದೆ. ಭಕ್ತರಿಗಾಗಿ 1.5 ಲಕ್ಷ ಲಾಡು ಸಿದ್ಧಪಡಿಸಲಾಗಿದೆ.