ಚಾಮರಾಜನಗರ: ವಿದ್ಯಾರ್ಥಿಗಳಿಗೆ ಕೊಡುವ ಸರ್ಕಾರದ ಮಹತ್ವಾಕಾಂಕ್ಷೆಯ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಗ್ಗೆ ಟೀಕಿಸುವವರೇ ಹೆಚ್ಚು. ಆದರೆ, ಈ ಶಾಲೆ ಹಾಗಲ್ಲ. ಇಲ್ಲಿ ವಿದ್ಯಾರ್ಥಿಗಳು ನಿತ್ಯವೂ ಬಗೆ ಬಗೆಯ ಆಹಾರ ಸೇವಿಸುತ್ತಾರೆ. ಹೌದು, ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ " ಅಕ್ಷರ ದಾಸೋಹ ಜೋಳಿಗೆ " ಎಂಬ ವಿಭಿನ್ನ ಪರಿಕಲ್ಪನೆ ಜಾರಿಯಲ್ಲಿದೆ. ಗ್ರಾಮಸ್ಥರು ತಾವು ಬೆಳೆದ ತರಕಾರಿಗಳು, ಹಣ್ಣುಗಳನ್ನು ಶಾಲೆಗೆ ತಂದುಕೊಡುತ್ತಾರೆ. ಹಾಗಾಗಿ ನಿತ್ಯವೂ ವಿಶೇಷ ಆಹಾರ ಈ ಮಕ್ಕಳಿಗೆ ಲಭ್ಯವಾಗುತ್ತಿದೆ.
ಅಲ್ಲದೇ ಶಾಲೆಯಲ್ಲಿ ಕೈತೋಟ ಮಾಡಿಕೊಂಡಿದ್ದು ಸೊಪ್ಪು, ತರಕಾರಿಗಳನ್ನು ಬೆಳೆಯಲಾಗುತ್ತದೆ. ಇದರೊಟ್ಟಿಗೆ ಗ್ರಾಮಸ್ಥರು ತಾವು ಬೆಳೆದ ಹಣ್ಣು - ತರಕಾರಿಗಳನ್ನು ತಂದು ಕೊಡುತ್ತಾರೆ. ಹಲಸು, ಮಾವು, ನೇರಳೆ, ಬಾಳೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ಹಾಗೂ ಹಲಸಂದೆ, ಹೆಸರು, ಅವರೆ ಸೇರಿದಂತೆ ವಿವಿಧ ಕಾಳುಗಳನ್ನು ಮತ್ತು ತರಕಾರಿಗಳನ್ನು ಈ ಅಕ್ಷರ ದಾಸೋಹ ಜೋಳಿಗೆಗೆ ತಂದುಕೊಡಲಿದ್ದಾರೆ.