ಚಾಮರಾಜನಗರ: ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ಮೃತಪಟ್ಟಿದ್ದು, ನೆಚ್ಚಿನ ನಟನ ಸಾವಿನ ಸುದ್ದಿ ನಾಡಿನ ಜನತೆಗೆ ಆಘಾತವನ್ನುಂಟು ಮಾಡಿದೆ. ಅಗಲಿದ ನೆಚ್ಚಿನ ನಟರಿಗೆ ಅಭಿಮಾನಿಗಳು ರಾತ್ರಿಯೆಲ್ಲ ಭಜನೆ ಮಾಡಿ ನಮನ ಸಲ್ಲಿಸಿದ ಘಟನೆ ಚಾಮರಾಜನಗರದ ಉಪ್ಪಾರ ಬೀದಿಯಲ್ಲಿ ನಡೆಯಿತು.
ಪುನೀತ್ ರಾಜ್ಕುಮಾರ್ಗೆ ವಿಶೇಷ ನಮನ ಅಪ್ಪು ಭಾವಚಿತ್ರಕ್ಕೆ ಹೂವಿನ ಹಾರಗಳನ್ನು ಹಾಕಿ, ದೀಪ ಹೊತ್ತಿಸಿ ರಾತ್ರಿ ಪೂರ್ತಿ ಕನ್ನಡ ಚಿತ್ರ ಗೀತೆಗಳು, ದೇವರ ಭಜನೆಗಳು, ಜನಪದ ಹಾಡುಗಳನ್ನು ಹಾಡಿ ಅಗಲಿದ ನಟನಿಗೆ ಗೀತ ನಮನ ಸಲ್ಲಿಸಿದ್ದಾರೆ. ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶವೂ ಒಳಗೊಂಡಂತೆ ಪುನೀತ್ ಭಾವಚಿತ್ರಕ್ಕೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿ, ಪ್ಲೆಕ್ಸ್ ಹಾಕಿದ್ದಾರೆ. ಕೊಳ್ಳೇಗಾಲದಲ್ಲಿ ಮೇಣದಬತ್ತಿ ಹಿಡಿದು ಮೆರವಣಿಗೆ ಮಾಡಲಾಗಿದೆ.
ಬಂದ್ಗೆ ಕರೆ:
ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಶಿವಸೈನ್ಯ, ಅಪ್ಪು ಬ್ರಿಗೇಡ್, ರಾಜರತ್ನ ಸಮಿತಿ ಹಾಗೂ ಡಾ. ರಾಜ್ ಕುಮಾರ್ ಅಭಿಮಾನಿಗಳ ವಿವಿಧ ಸಂಘಗಳ ಆಶ್ರಯದಲ್ಲಿ ಇಂದು ಚಾಮರಾಜನಗರದಲ್ಲಿ ಸ್ವಯಂಪ್ರೇರಿತ ಬಂದ್ ಘೋಷಿಸಲಾಗಿದೆ.
ಅಪ್ಪು ಅಭಿಮಾನಿಗಳು, ಕನ್ನಡ ಚಿತ್ರರಂಗದ ನಟರ ಅಭಿಮಾನಿಗಳು, ಜಿಲ್ಲೆಯ ಜನತೆ ಸಹಕರಿಸಬೇಕು ಎಂದು ಆಜಾದ್ ಹಿಂದೂ ಸೇನೆ ಅಧ್ಯಕ್ಷ ಎಂ.ಎಸ್. ಫೃಥ್ವಿರಾಜ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಅಥಣಿ: ಅಪ್ಪು ಅಗಲಿಕೆಯಿಂದ ಮನನೊಂದ ಅಭಿಮಾನಿ ನೇಣಿಗೆ ಶರಣು
ಪುನೀತ್ ರಾಜ್ ಕುಮಾರ್ ಅವರು ಚಾಮರಾಜನಗರ ಜಿಲ್ಲೆಯವರೇ ಆಗಿರುವುದರಿಂದ, ಅಲ್ಲದೇ ಚೆಲುವ ಚಾಮರಾಜನಗರ ರಾಯಾಭಾರಿಯಾಗಿರುವ ಹಿನ್ನೆಲೆ, ಅವರ ಅಂತ್ಯಕ್ರಿಯೆಯಂದು ಪ್ರತಿಯೊಬ್ಬರು ಶಾಂತಿ ರೀತಿಯಲ್ಲಿದ್ದು, ಜಿಲ್ಲೆಯಲ್ಲಿ ಸ್ವಯಂಪ್ರೇರಿತ ಬಂದ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಎಂ.ಎಸ್. ಪೃಥ್ವಿರಾಜ್ ಮನವಿ ಮಾಡಿದ್ದಾರೆ.