ಚಾಮರಾಜನಗರ: ಕನ್ನಡ ಚಿತ್ರರಂಗದ ವರನಟ, ದಿ. ಡಾ.ರಾಜ್ಕುಮಾರ್ ಅವರ ಪತ್ನಿ ದಿ. ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರ ಎಸ್.ಎ. ಶ್ರೀನಿವಾಸ್ ಅವರ ಪುತ್ರ ಸೂರಜ್ ಕುಮಾರ್ (ಧೀರಜ್) ಅವರು ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಹುಂಡಿ ಗೇಟ್ ಬಳಿ ಶನಿವಾರ ನಡೆದಿದೆ. ಇವರಿಗೆ ಕೇವಲ 35 ವರ್ಷ. ಇವರು ಕೆಲವು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
ಬೈಕ್ಗೆ ಟಿಪ್ಪರ್ ಡಿಕ್ಕಿ, ಬಲಗಾಲು ಕಟ್: ಊಟಿಗೆ ಸೋಲೋ (ಏಕಾಂಗಿ) ಟ್ರಿಪ್ ತೆರಳಿದ್ದ ಸೂರಜ್ ಕುಮಾರ್ ಹಿಂತಿರುಗುವಾಗ ಟಿಪ್ಪರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಾಯಾಳುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಲು ಸಂಪೂರ್ಣ ನಜ್ಜುಗುಜ್ಜಾಗಿದ್ದು ಬಲಗಾಲನ್ನು ಸಂಪೂರ್ಣವಾಗಿ ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿದೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ: ಸೂರಜ್ ಕುಮಾರ್ ಕರ್ನಾಟಕದ ಹೆಸರಾಂತ ಚಿತ್ರ ನಿರ್ಮಾಪಕ ಎಸ್.ಎ.ಶ್ರೀನಿವಾಸ್ ಅವರ ಪುತ್ರ. ಶ್ರೀನಿವಾಸ್ ಅವರು ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮ. ಐರಾವತ ಮತ್ತು ತಾರಕ್ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ಸೂರಜ್ ಕುಮಾರ್ ನೀನಾಸಂ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ ನಟನೆಗೆ ತರಬೇತಿ ಪಡೆದುಕೊಂಡಿದ್ದರು.