ಕರ್ನಾಟಕ

karnataka

ETV Bharat / state

ಸೋಮಣ್ಣ ವರುಣಗೆ ಬಂದಿದ್ದು ಸಿದ್ದುಗೆ ಭಯ ಹುಟ್ಟಿಸಿದೆ: ಪ್ರತಾಪ್ ಸಿಂಹ - ಬಿಜೆಪಿ ಅಭ್ಯರ್ಥಿ ಸೋಮಣ್ಣ

ವರುಣ ಕ್ಷೇತ್ರಕ್ಕೆ ಸೋಮಣ್ಣ ಯಾಕೆ ಬಂದಿದ್ದು ಎಂಬ ಸಿದ್ದು ಹೇಳಿಕೆಗೆ ಪ್ರತಾಪ್ ಸಿಂಹ ಹಾಗೂ ಸೋಮಣ್ಣ ತಿರುಗೇಟು ನೀಡಿದರು.

MP Prathap Simha
ಸಂಸದ ಪ್ರತಾಪ್​ ಸಿಂಹ

By

Published : Apr 19, 2023, 6:22 PM IST

ಸಂಸದ ಪ್ರತಾಪ್​ ಸಿಂಹ ಹೇಳಿಕೆ

ಚಾಮರಾಜನಗರ: ಬೆಂಗಳೂರು ಬಿಟ್ಟು ವರುಣಗೆ ಏಕೆ ಬಂದಿದ್ದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಅಭ್ಯರ್ಥಿ ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜನಗರದಲ್ಲಿ ಸೋಮಣ್ಣ ನಾಮಪತ್ರ ಸಲ್ಲಿಕೆ ವೇಳೆ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಳೇ ಮೈಸೂರು ಭಾಗದಲ್ಲಿ ಹೈಕಮಾಂಡ್ ನಮ್ಮ ಅಭಿಪ್ರಾಯ ಕೇಳಿತ್ತು. ವರುಣಗೆ ಸಿದ್ದರಾಮಯ್ಯ ವಾಪಸ್ ಬರ್ತಿದ್ದಾರೆ. ಆ ಉತ್ಸಾಹ ತಣ್ಣಗಾಗಿಸಲು ಯಾರನ್ನು ಕಳಿಸಬೇಕು ಎನ್ನುವ ಚರ್ಚೆಯಿತ್ತು. ಆಗ ನಾವು ಹೇಳಿದ್ದು ಸೋಮಣ್ಣ ಹೆಸರು. ಚಾಮರಾಜನಗರ, ವರುಣ ಎರಡು ಕ್ಷೇತ್ರಗಳಿಗೂ ಅವರನ್ನು ಕಳಿಸಿದ್ದಾರೆ. 13 ರಂದು ನೀವೂ ಗೆಲ್ಲಿಸಿಕೊಡಿ. ನಾವೂ ಸೋಮಣ್ಣ ಅವರನ್ನು ವರುಣದಲ್ಲಿ ಗೆಲ್ಲಿಸ್ತೀವಿ. ನಂತರ ಅವರು ವರುಣದಲ್ಲಿರಬೇಕೋ, ಚಾಮರಾಜನಗರದಲ್ಲಿರಬೇಕೋ ಎಂಬುದನ್ನು ತೀರ್ಮಾನ ಮಾಡೋಣ ಎಂದು ಮನವಿ ಮಾಡಿದರು.

ಮೋದಿ ಕರ್ನಾಟಕಕ್ಕೆ ಬಂದರೆ ಅವರ ಗುಂಡಿಗೆಯಲ್ಲಿ ಭಯ ಶುರುವಾಗಲಿದೆ. ನಾನು ಗೋಲಿ, ಬುಗುರಿ ಆಡಿ ಬೆಳೆದಿದ್ದು ಸಿದ್ದರಾಮನಹುಂಡಿಯಲ್ಲಿ, ವರುಣಗೆ ಯಾಕೆ ಸೋಮಣ್ಣ ಬಂದ್ರು ಎಂದು ಕೇಳುತ್ತಿದ್ದಾರೆ. ಅವರ ಎದೆಯಲ್ಲಿ ನಡುಕ ಶುರುವಾಗಿದೆ. ಅವರಿಗೆ ಭಯ ಬರಿಸಬೇಕಿತ್ತು, ಬರಿಸಿದ್ದಾಗಿದೆ. ನಮಗೆ ಖುಷಿ ಇದೆ ಎಂದು ವ್ಯಂಗ್ಯವಾಡಿದರು.

ಸೋಮಣ್ಣ ಯಾಕೆ ಬಂದ್ರು ಅಂತಾ ಕೇಳ್ತಾರೆ, ಇಂದಿರಾ ಗಾಂಧಿ ಏಕೆ ಚಿಕ್ಕಮಗಳೂರಿಗೆ ಬಂದ್ರು, ಅವರೇನು ಅಲ್ಲಿ ಗೋಲಿ-ಬುಗುರಿ ಆಡಿದ್ರಾ, ಇಟಲಿಯಲ್ಲಿ ಹುಟ್ಟಿದ್ದ ಸೋನಿಯಾ ಗಾಂಧಿ ಬಳ್ಳಾರಿಗೆ ಬಂದ್ರು, ಡೆಲ್ಲಿಯಲ್ಲಿ ಹುಟ್ಟಿದ್ದ ರಾಹುಲ್ ಗಾಂಧಿ ವಯನಾಡಿನಲ್ಲಿ ನಿಂತಿದ್ದರು. ತಾವು ಯಾಕೆ ಬಾದಾಮಿಗೆ ಹೋದ್ರಿ, ಕೋಲಾರ ಹುಡುಕ್ತಾ ಇದ್ರಿ ಎಂದು ಲೇವಡಿ ಮಾಡಿದರು.

ಅಪ್ಪ, ಮಗ ಇಬ್ಬರೂ ಕೂಡ ಬಾಗಿಲು ಕಾದಿದ್ದೀರಿ, ನಿಮಗೆ ಈ ಪರಿಸ್ಥಿತಿ ಬರಬಾರದಿತ್ತು, ಸೋಮಣ್ಣ ಹಳೇ ಮೈಸೂರಿಗೆ ಬಂದ ನಂತರ ವಾತಾವರಣ ಬದಲಾಗಿದೆ. ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿ ನಾಲ್ಕನ್ನೂ ಗೆಲ್ಲುತ್ತೇವೆ. ಮೈಸೂರಿನಲ್ಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ, ಮಾದಪ್ಪ, ಚಾಮುಂಡೇಶ್ವರಿ ಇಬ್ಬರ ಸೇವೆಯನ್ನೂ ಸೋಮಣ್ಣ ಮಾಡಿದ್ದಾರೆ. ಆದ್ದರಿಂದ ಎರಡೂ ಕಡೆ ಗೆಲ್ಲಿಸಿಕೊಳ್ಳುವ ಕೆಲಸ ಮಾಡೋಣ ಎಂದು ಹೇಳಿದರು.

ಸಚಿವ ಸೋಮಣ್ಣ ಮಾತನಾಡಿ, ಇಂದಿರಾ ಗಾಂಧಿಗೂ, ರಾಹುಲ್ ಗಾಂಧಿಗೂ ಕರ್ನಾಟಕಕ್ಕೂ ಕೇರಳಕ್ಕೂ ಏನು ಸಂಬಂಧ? ಅದೇ ರೀತಿ ನಾನು ವರುಣದಲ್ಲಿ ಸ್ಪರ್ಧೆ ಮಾಡಿದ್ದೇನೆ ಎಂದು ಸಿದ್ದು ವಿರುದ್ಧ ಆಕ್ರೋಶ ಹೊರಹಾಕಿದರು. ನಿನ್ನೆ ಒಂದೇ ದಿನ ವರುಣದ 24 ಗ್ರಾಮಗಳನ್ನು ಸುತ್ತಿದ್ದೇನೆ, ಜನರು ಬದಲಾವಣೆ ಬಯಸಿದ್ದಾರೆ. ಅದೇ ರೀತಿ, ಚಾಮರಾಜನಗರದ ಜನರು ಕೂಡ ಈ ಬಾರಿ ನನಗೆ ಆಶೀರ್ವಾದ ಮಾಡಬೇಕು, 3 ಬಾರಿ ಕಾಂಗ್ರೆಸ್​ಗೆ ಆಶೀರ್ವಾದ ಮಾಡಿದ್ದೀರಿ, ನನಗೆ 5 ವರ್ಷ ಅವಕಾಶ ಕೊಡಿ, ರಾಜ್ಯದಲ್ಲೇ ನಂ 1 ತಾಲೂಕು ಮಾಡುವೆ ಎಂದು ಕೋರಿದರು.

ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

'ಸಿದ್ದರಾಮಯ್ಯ ದಲಿತ ವಿರೋಧಿ':ಸಿದ್ದರಾಮಯ್ಯ ದಲಿತ ವಿರೋಧಿ ನಾಯಕ ಎಂದು ವಿಧಾನ ಪರಿಷತ್​ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಓರ್ವ ದಲಿತ ವಿರೋಧಿ ನಾಯಕ, ಮೇಲೆ ಬಸಪ್ಪ- ಒಳಗೆ ಬರೀ ವಿಷಪ್ಪ ಎಂಬ ರೀತಿ ನಾಯಕ, ಎಲ್ಲ ದಲಿತರನ್ನು ತುಳಿದು ಆಡಳಿತ ನಡೆಸಿದ್ದಾರೆ ಎಂದು ಕಿಡಿಕಾರಿದರು.

ಅವರದೇ ಹಾಲಿ ದಲಿತ ಶಾಸಕನಿಗೆ ಟಿಕೆಟ್ ಕೊಡದೇ ತುಳಿದರು, ಶಾಸಕನ ಮನೆಗೆ ಬೆಂಕಿ ಇಟ್ಟರು, ತುಮಕೂರಿನಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದರು. ಖರ್ಗೆ ಅವರನ್ನು ಕೇಂದ್ರಕ್ಕೆ ಕಳುಹಿಸಿ ಈಗ ದಲಿತ ನಾಯಕ, ಹಿಂದುಳಿದ ನಾಯಕರ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ತಮ್ಮನ್ನು ಹುಲಿ, ರಾಜಾಹುಲಿ ಎಂದುಕೊಳ್ಳುವ ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಪರದಾಡಿದರು. ಕೋಲಾರದಲ್ಲಿ ವ್ಯತಿರಿಕ್ತ ಸರ್ವೇ ಬಂದಿದ್ದರಿಂದ ಹಳೇ ಗಂಡನ ಪಾದ ಗತಿ ಎಂಬಂತೆ ವರುಣಾಗೆ ಬಂದಿದ್ದಾರೆ. ಮೀಸೆ ತಿರುವಿಕೊಂಡು ದೊಡ್ಡ ಲೀಡರ್ ಎಂದು ಅಲೆಯುತ್ತಿದ್ದ ಸಿದ್ದರಾಮಯ್ಯ ಅವರ ಬಟ್ಟೆ ಈಗ ಒದ್ದೆಯಾಗಿದೆ. ಐದು ವರ್ಷ ಸಿಎಂ ಆದರೂ ತಮ್ಮ ಕ್ಷೇತ್ರಕ್ಕೆ, ಮೈಸೂರಿಗೆ ಏನೂ ಮಾಡಿಲ್ಲ. ಅಲ್ಲಿನ ಜನರು ಚಾಮುಂಡೇಶ್ವರಿಯಲ್ಲಿ ಮಕಾಡೆ ಮಲಗಿಸಿದ್ದರು. ನಂತರ ಬಾದಾಮಿಗೆ ಹೋಗಿ ಒಂದು ಸಾವಿರ ಲೀಡ್​ನಲ್ಲಿ ಗೆದ್ದರು. ಕೋಲಾರಕ್ಕೆ ಬಂದರು, ನಾನು ಹೋಗಿ ಒಂದು ಗಸ್ತ್ ಕೊಟ್ಟೆ. ಮತ್ತೆ ಹಳೆಯ ಗಂಡನ ಪಾದವೇ ಗತಿ ಅಂತಾ ವರುಣಾಗೆ ಬಂದಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ. ಪರಮೇಶ್ವರ್ ಅವರನ್ನೂ ಕತ್ತು ಹಿಚುಕಿ ರಾಜಕೀಯವಾಗಿ ಮುಗಿಸಿದರು. ಖರ್ಗೆ, ಮುನಿಯಪ್ಪ ಅವರನ್ನೂ ಸೋಲಿಸಿದರು ಎಂದು ಆಕ್ರೋಶ ಹೊರಹಾಕಿದರು.

ನಮ್ಮ ಪಕ್ಷದಿಂದ ಒಬ್ಬರು, ಇಬ್ಬರು ಅಷ್ಟೆ ತೊರೆದು ಹೋಗಿದ್ದಾರೆ. ಹೊಸ ರಕ್ತವನ್ನು ರಾಜಕೀಯಕ್ಕೆ ತರುವ ಕೆಲಸ ಹೈಕಮಾಂಡ್ ಮಾಡಿದೆ. ಟಿಕೆಟ್ ಕೊಟ್ಟಿಲ್ಲ ಅಂತಾ ಲಕ್ಷ್ಮಣ ಸವದಿ ಪಕ್ಷ ಬಿಟ್ಟಿದ್ದಾರೆ. ಮಹೇಶ್ ಕುಮಟಳ್ಳಿ‌, ರಮೇಶ್ ಜಾರಕಿಹೊಳಿ ಬಂದಿದ್ರಿಂದ ನಾವೂ ಸರ್ಕಾರ ನಡೆಸಿದ್ದು, ಅವರು ಪಕ್ಷ ಬಿಟ್ಟಿದ್ದರಿಂದ ನಮಗೆ ಏನು ತೊಂದರೆ ಆಗಲ್ಲ. ಈಗ ಕಾಂಗ್ರೆಸ್​ನವರು ನಮ್ಮನ್ನು ಲಿಂಗಾಯತ ವಿರೋಧಿ ಎನ್ನುತ್ತಿದ್ದಾರೆ. ಆದರೆ ಬಿಜೆಪಿ ಈ ಬಾರಿ 63 ಜನ ಲಿಂಗಾಯತರಿಗೆ ಟಿಕೆಟ್ ಕೊಟ್ಟಿದ್ದೇವೆ. ಹಾಗಾದ್ರೆ ನಿಜವಾದ ಲಿಂಗಾಯತ ವಿರೋಧಿ ಯಾರು? ಲಿಂಗಾಯತ ಜಾತಿ ಹೊಡೆಯಲು ಹೋಗಿ ಕಳೆದ ಬಾರಿ ಚುನಾವಣೆಯಲ್ಲಿ 80ಕ್ಕೆ ಬಂದರು. ಈ ಬಾರಿ ಅಷ್ಟು ಕೂಡ ಗೆಲ್ಲಲ್ಲ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

ಸಿಎಂ ಆಗುವ ಯೋಗ್ಯತೆ ಇರೋದ್ರಲ್ಲಿ ಸೋಮಣ್ಣ ಕೂಡ ಒಬ್ಬರು. ವರುಣಾ ಹಾಗೂ ಚಾಮರಾಜನಗರ ಎರಡು ಕಡೆಯೂ ಸೋಮಣ್ಣ ಗೆಲ್ಲಬೇಕು. ಮೋದಿ ಹೆಸರು ಕೇಳಿದ್ರೆ ಕಾಂಗ್ರೆಸ್ ಗಢಗಢ ನಡುಗುತ್ತದೆ. ಮೋದಿ ಸೋಮಣ್ಣ ಅವರನ್ನು ಎರಡು ಕ್ಷೇತ್ರಕ್ಕೆ ಕಳುಹಿಸಿದ್ದಾರೆ. ಆದ್ದರಿಂದ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಚಾಮರಾಜನಗರದಲ್ಲಿಂದು ಸೋಮಣ್ಣ ನಾಮಪತ್ರ ಸಲ್ಲಿಕೆ: ಟೆಂಪಲ್ ರನ್, ಬೃಹತ್ ಸಮಾವೇಶ

ABOUT THE AUTHOR

...view details