ಚಾಮರಾಜನಗರ: ವರುಣಾ ಕ್ಷೇತ್ರದ ಬಳಿಕ ಚಾಮರಾಜನಗರದಲ್ಲಿ ಚುನಾವಣಾ ರಣನೀತಿ ರೂಪಿಸಲು ಬಿಜೆಪಿ ಅಭ್ಯರ್ಥಿ ಸೋಮಣ್ಣ ಬರುತ್ತಿದ್ದು, ಶನಿವಾರ ಮತ್ತು ಭಾನುವಾರ ಎರಡು ದಿನ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿ ಪ್ರಚಾರ ನಡೆಸಲಿದ್ದಾರೆ.
ಹೊಸ ಮನೆಗೆ ಸೋಮಣ್ಣ ಪತ್ನಿ ಪೂಜೆ:ಚಾಮರಾಜನಗರದಲ್ಲಿ ಸಚಿವ ಸೋಮಣ್ಣ ಹೊಸ ಮನೆ ಮಾಡಿದ್ದು, ಸದ್ದಿಲ್ಲದೇ ಸೋಮಣ್ಣ ಪತ್ನಿ ಆಗಮಿಸಿ ಹೊಸ ಮನೆಗೆ ಪೂಜೆ ಸಲ್ಲಿಸಿ ತೆರಳಿದ್ದಾರೆ. ವರುಣದಷ್ಟೇ ಚಾಮರಾಜನಗರದಲ್ಲೂ ಸೋಮಣ್ಣ ಪ್ರಬಲ ಸ್ಪರ್ಧೆ ಎದುರಿಸಿಬೇಕಾಗಿದ್ದು, ಇದಕ್ಕಾಗಿ ಎರಡು ದಿನ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿ ರಣನೀತಿ ರೂಪಿಸುವ ಜೊತೆಗೆ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಸಮಯವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ತಾಪಂ ಕ್ಷೇತ್ರವಾರು ಪ್ರಚಾರ ನಡೆಸಿ, ಬಹಿರಂಗ ಸಭೆ, ಮುಖಂಡರನ್ನು ಭೇಟಿಯಾಗಿ ತಮ್ಮದೇ ಆದ ಸ್ಟೈಲಿನಲ್ಲಿ ಅಖಾಡಕ್ಕೆ ಧುಮುಕಲಿದ್ದಾರೆ.
ಬಂಡಾಯ ಶಮನ - ರಣನೀತಿಯತ್ತ ಗಮನ:ಈಗಾಗಲೇ ಬಿಜೆಪಿಯಲ್ಲಿನ ಬಂಡಾಯ ಅರ್ಧ ಶಮನವಾಗಿದ್ದು, ಸೋಮಣ್ಣ ಹಾದಿ ಸುಗಮವಾಗುತ್ತಿದೆ. ಮುಖಂಡರನ್ನು ಭೇಟಿಯಾಗಿ ಲೂಪ್ ಹೋಲ್ಗಳನ್ನು ಮುಚ್ಚಿ ಮುಖಂಡರ ಪಕ್ಷಾಂತರ ಎಲ್ಲದಕ್ಕೂ ಬ್ರೇಕ್ ಹಾಕಲಿದ್ದಾರೆ. ಒಟ್ಟಿನಲ್ಲಿ ವರುಣ ಹಾಗೂ ಚಾಮರಾಜನಗರದಲ್ಲಿ ಕಮಲ ಪತಾಕೆ ಹಾರಿಸಲು ಹತ್ತಾರು ಅಸ್ತ್ರ ಪ್ರಯೋಗಿಸಲಿರುವ ಸೋಮಣ್ಣ ಎರಡು ದಿನ ಮೊಕ್ಕಾಂ ಹೂಡಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಲಿದ್ದಾರೆ.
ಶನಿವಾರ ಕೂಡ್ಲೂರು, ಆಲೂರು, ಚಂದಕವಾಡಿ, ಅಂಕಶೆಟ್ಟಿಪುರ, ಅರಕಲವಾಡಿ ಗ್ರಾಮಗಳಲ್ಲಿ ಸಭೆ ನಡೆಸಿ, ಮುಖಂಡರ ಭೇಟಿ ನಡೆಸಲಿರುವ ಸೋಮಣ್ಣ ಭಾನುವಾರ ಉಡಿಗಾಲ, ಮಾದಪುರ ಗ್ರಾಮಗಳಲ್ಲಿ ರೋಡ್ ಶೋ, ಬಹಿರಂಗ ಸಭೆ ನಡೆಸಲಿದ್ದಾರೆ.