ಚಾಮರಾಜನಗರ: ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಪ್ರತಿಷ್ಠೆ ಪಣಕ್ಕಿಡಲು ತೆರಳುತ್ತಿರುವ ಸಚಿವ ವಿ. ಸೋಮಣ್ಣ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದು ವರುಣಾಕ್ಕೇ ಹೆಚ್ಚು ತೆರಳದಂತೆ ಚಕ್ರವ್ಯೂಹ ಹೆಣೆಯುತ್ತಿದೆ. ಹೌದು.., ಸಿದ್ದರಾಮಯ್ಯ ವಿರುದ್ಧ ಪ್ರಬಲ ಸ್ಪರ್ಧೆವೊಡ್ಡಲು ಬಿಜೆಪಿ ಸೋಮಣ್ಣಗೆ ಟಿಕೆಟ್ ಕೊಟ್ಟಿದೆ. ಆದರೆ, ವರುಣಾಗೆ ಸೋಮಣ್ಣ ಹೋಗಲಾರದೇ ಚಾಮರಾಜನಗರದಲ್ಲೇ ಕಟ್ಟಿಹಾಕಲು ಕಾಂಗ್ರೆಸ್ ಮುಂದಾಗಿದ್ದು, ಇದಕ್ಕೆ ಬಿಜೆಪಿ ಬಂಡಾಯವೇ ಬಂಡವಾಳವಾಗಿದೆ.
ಸೋಮಣ್ಣಗೆ ಚಾಮರಾಜನಗರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಸ್ಪೋಟವಾಗಿದೆ. ಟಿಕೆಟ್ ವಂಚಿತ ನಾಗಶ್ರೀ ಪ್ರತಾಪ್ ಅವರ ಬೆಂಬಲಿಗರು ಈಗಾಗಲೇ ಕೆರಳಿ ಕೆಂಡವಾಗಿದ್ದು ಸಾಲುಸಾಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕೆಆರ್ಐಡಿಎಲ್ ಅಧ್ಯಕ್ಷ ರುದ್ರೇಶ್ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ಹರಿಹಾಯ್ದಿದ್ದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸೋಮಣ್ಣನವರಿಗೆ ವರುಣಾದತ್ತ ಗಮನ ಹರಿಸುವುದು ಅಸಾಧ್ಯ: ಹೇಳಿ-ಕೇಳಿ ಚಾಮರಾಜನಗರ ಹಾಗೂ ವರುಣಾದಲ್ಲಿ ಲಿಂಗಾಯತ ಪ್ರಾಬಲ್ಯ ಇದ್ದು, ಸೋಮಣ್ಣ ಅವರು ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ, ಯಡಿಯೂರಪ್ಪ ಬಗ್ಗೆ ಇಲ್ಲ ಸಲ್ಲದ ಮಾತು ಆಡುತ್ತಾರೆ ಎಂಬ ರುದ್ರೇಶ್ ಆರೋಪ ಈಗಾಗಾಲೇ ಸಮುದಾಯದ ಜನರಲ್ಲಿ ಕಿಚ್ಚು ಹೊತ್ತಿಸಿದೆ. ಇದು ಚುನಾವಣೆ ಹೊತ್ತಲ್ಲಿ ಅಂಡರ್ ಕರೆಂಟಾಗಿ ಕೆಲಸ ಮಾಡಲಿದೆ ಎಂಬುದು ಸೋಮಣ್ಣನವರಿಗೆ ಮುಂಚಿತವಾಗಿ ತಿಳಿದಿದ್ದು, ಇದನ್ನು ಶಮನ ಮಾಡುವುದರಲ್ಲೇ ಸೋಮಣ್ಣ ಕಾಲ ಕಳೆಯಬೇಕಾಗುತ್ತದೆ. ವರುಣಾದತ್ತ ಗಮನ ಹರಿಸುವುದು ಅಸಾಧ್ಯವಾಗಲಿದೆ ಎಂಬುದು ಕೈ ಪಡೆ ರಣತಂತ್ರವಾಗಿದೆ.