ಚಾಮರಾಜನಗರ: ಹಾವೊಂದಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಪ್ರಾಣ ಉಳಿಸಿರುವ ಅಪರೂಪದ ಘಟನೆ ನಗರದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆದಿದ್ದು, ಮೂರು ದಿನದ ಆರೈಕೆ ನಂತರ ನಾಗಪ್ಪ ಕಾಡಿಗೆ ಮರಳಿದ್ದಾನೆ.
ಚಾಮರಾಜನಗರದ ಸೋಮವಾರಪೇಟೆಯಲ್ಲಿ 4 ದಿನಗಳ ಹಿಂದೆ ಜಮೀನೊಂದರಲ್ಲಿ ಉಳುಮೆ ಮಾಡುವಾಗ ಹಾವೊಂದು ಗಾಯಗೊಂಡಿತ್ತು. ಆ ಹಾವಿಗೆ ಉರಗ ಪ್ರೇಮಿ ಸ್ನೇಕ್ ಅಶೋಕ್ ಪಶು ಆಸ್ಪತ್ರೆಯಲ್ಲಿ ಡಾ.ಮೂರ್ತಿ ಎಂಬುವರಿಂದ ಚಿಕಿತ್ಸೆ ಕೊಡಿಸಿದ್ದರು.
ಚಾಮರಾಜನಗರದಲ್ಲಿ ಹಾವಿನ ಆಪರೇಷನ್ ಸಕ್ಸಸ್ ಹಾವಿನ ದೇಹದ ಎರಡು ಕಡೆ ಗಾಯವಾಗಿದ್ದು, ಹರಿದ ಚರ್ಮವನ್ನು ಹೊಲಿದು ಸೇರಿಸಲಾಗಿದೆ. ಜೊತೆಗೆ ಮೂಳೆ ಮುರಿತವನ್ನು ಕಿರು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ. ಮೂರು ದಿನ ಸ್ನೇಕ್ ಅಶೋಕ್ ಆರೈಕೆಯಲ್ಲೇ ಇದ್ದ ನಾಗರಹಾವನ್ನು ಇಂದು ನಗರದ ಕರಿವರದರಾಜಸ್ವಾಮಿ ಬೆಟ್ಟಕ್ಕೆ ಬಿಟ್ಟು ಬರಲಾಗಿದೆ ಎಂದು ಸ್ನೇಕ್ ಅಶೋಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೈ ನಾಯಕರ 'ಪ್ರತ್ಯೇಕ' ಪಾದಯಾತ್ರೆ ಪ್ರದರ್ಶನ; ವಿಪರೀತ ಸಂಚಾರದಟ್ಟಣೆಗೆ ಜನಸಾಮಾನ್ಯರು ಹೈರಾಣ
ಸ್ನೇಕ್ ಅಶೋಕ್ ಹಾವು ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿಯವರೆಗೆ 17-18 ಸಾವಿರದಷ್ಟು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.