ಕರ್ನಾಟಕ

karnataka

ETV Bharat / state

ದೇವನೂರು ಮಹಾದೇವ ಅವರನ್ನ ಭೇಟಿ ಆಗ್ತೇನೆ.. ಈಗಾಗಲೇ ಪಠ್ಯ ಮುದ್ರಣವಾಗಿ, ವಿತರಿಸಲಾಗ್ತಿದೆ.. ಸಚಿವ ಬಿ ಸಿ ನಾಗೇಶ್ - ಶಿಕ್ಷಣ ಸಚಿವ ನಾಗೇಶ್

ಎಲ್ಲಾ ಕಾಲದಲ್ಲೂ ಪಠ್ಯ ಪರಿಷ್ಕರಿಸಿದಾಗ ಗೊಂದಲ, ವಿರೋಧ ಇದ್ದೇ ಇದೆ‌. ತಾತ್ವಿಕ ಭಿನ್ನತೆ-ಚರ್ಚೆಗೆ ಅಭ್ಯಂತರವಿಲ್ಲ. ಆದರೆ. ರಾಜಕೀಯಗೊಳಿಸುತ್ತಿರುವುದು ಸರಿಯಲ್ಲ. ಪಠ್ಯದ ವಿಚಾರ ಇಟ್ಟುಕೊಂಡು ಹಿಂದೂ ಸಮಾಜವನ್ನು ಕಾಂಗ್ರೆಸ್ ಒಡೆಯುವ ಯತ್ನ ಮಾಡುತ್ತಿದೆ..

education minister Nagesh
ಶಿಕ್ಷಣ ಸಚಿವ ಬಿ.ಸಿ ನಾಗೇಶ್

By

Published : May 25, 2022, 2:24 PM IST

ಚಾಮರಾಜನಗರ :ತನಗೆ ಎಲ್ಲವೂ ಗೊತ್ತು ಎನ್ನುವ ಆ್ಯಟಿಟ್ಯೂಡ್, ಎಲ್ಲರನ್ನೂ ಏಕವಚನದಲ್ಲಿ ಕರೆಯುವ ವರ್ತನೆ ಈ ದೇಶದಲ್ಲಿ ನಡೆಯಲ್ಲ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಪರೋಕ್ಷವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಕಿಡಿಕಾರಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನೊಬ್ಬನಿಗೆ ಎಲ್ಲಾ ಗೊತ್ತು ಎನ್ನುವ ದುರಹಂಕಾರದ ವರ್ತನೆ 100 ವರ್ಷ ಇತಿಹಾಸದ ಕಾಂಗ್ರೆಸ್​​ಗೆ ಶೋಭೆ ತರಲ್ಲ. ಪಠ್ಯ ಪರಿಷ್ಕರಣೆ ಸಮಿತಿ ರಚಿಸಿ 8 ತಿಂಗಳುಗಳಾಗಿದ್ದು, ಈಗ ರಾಜಕೀಯವಾಗಿ ಮಾತನಾಡುತ್ತಿದ್ದಾರೆ. ರೋಹಿತ್ ಚಕ್ರತೀರ್ಥ ಪೋಸ್ಟ್ ಬಗ್ಗೆ, ಅವರ ಸರ್ಕಾರವೇ ಬಿ ರಿಪೋರ್ಟ್ ಕೊಟ್ಟಿದ್ದು. ಅವರು ವಾಟ್ಸ್​​ಆ್ಯಪ್​​ ಸಂದೇಶ ಅವರು ಹಂಚಿಕೊಂಡಿದ್ದಾರಷ್ಟೇ ಎಂದು ಚಕ್ರತೀರ್ಥ ಪರ ಬ್ಯಾಟ್ ಬೀಸಿದರು.

ವಿಪಕ್ಷ ನಾಯಕರ ವಿರುದ್ಧ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಾಗ್ದಾಳಿ ನಡೆಸಿರುವುದು..

ಮುಸ್ಲಿಂ ಮತ ಬಲಪಡಿಸಿಕೊಳ್ಳಲು ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಪ್ರಯತ್ನ ವಿಫಲವಾಯಿತು. ಕೊರೊನಾ ನಂತರ ಶಾಲಾರಂಭದ ಬಗ್ಗೆ ಕಾಂಗ್ರೆಸ್ ಟೀಕಿಸಿ ಫೇಲಾಯಿತು. ಯುಪಿ ಚುನಾವಣೆ ಬಳಿಕ ಕಾಂಗ್ರೆಸ್ ದೇಶದಲ್ಲಿ ಕಾಣೆಯಾಗುವ ಪರಿಸ್ಥಿತಿ ಇರುವುದರಿಂದ ಎಲ್ಲಾದರಲ್ಲೂ ರಾಜಕೀಯ ಮಾಡುತ್ತಿದ್ದಾರೆ.

ಭಗತ್ ಸಿಂಗ್, ಬಸವಣ್ಣ, ನಾರಾಯಣ ಗುರು ಪಠ್ಯ ಕೈಬಿಟ್ಟಿರುವುದು ಸುಳ್ಳು ಎಂದು ಗೊತ್ತಾದಾಗ ಹತಾಶರಾಗಿ ಈಗ ಜಾತಿ ತರುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಎಲ್ಲಾ ಕಾಲದಲ್ಲೂ ಪಠ್ಯ ಪರಿಷ್ಕರಿಸಿದಾಗ ಗೊಂದಲ, ವಿರೋಧ ಇದ್ದೇ ಇದೆ‌. ತಾತ್ವಿಕ ಭಿನ್ನತೆ-ಚರ್ಚೆಗೆ ಅಭ್ಯಂತರವಿಲ್ಲ.

ಆದರೆ, ರಾಜಕೀಯಗೊಳಿಸುತ್ತಿರುವುದು ಸರಿಯಲ್ಲ. ಪಠ್ಯದ ವಿಚಾರ ಇಟ್ಟುಕೊಂಡು ಹಿಂದೂ ಸಮಾಜವನ್ನು ಕಾಂಗ್ರೆಸ್ ಒಡೆಯುವ ಯತ್ನ ಮಾಡುತ್ತಿದೆ. ವೈಚಾರಿಕವಾಗಿ ಏನೂ ಇಲ್ಲದಿದ್ದಾಗ ಪೊಳ್ಳು ಮಾತನಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು.

ಪಠ್ಯ ತಡವಾಗಲು ಉಕ್ರೇನ್ ಯುದ್ಧ ಕಾರಣ :ಶೇ.80 ಪಠ್ಯ ವಿತರಣೆಯಾಗಿದ್ದು ಇನ್ನೂ ಒಂದು ತಿಂಗಳು ಅವಕಾಶವಿದೆ. ಈಗ ಶಾಲೆಗಳಲ್ಲಿ ಕಲಿಕಾ ಚೇತರಿಕೆ ನಡೆಯುತ್ತಿದ್ದು, ಪಠ್ಯ ಆರಂಭವಾಗಲು ಒಂದು ತಿಂಗಳಿದೆ. ಶೀಘ್ರ ವಿತರಣೆಯಾಗಲಿದೆ. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಪೇಪರ್ ಕೊರತೆ ಉಂಟಾಗಿದ್ದರ ಪರಿಣಾಮ ಪಠ್ಯ ಮುದ್ರಣ ತಡವಾಯಿತು ಎಂದು ಮಾಹಿತಿ ನೀಡಿದರು.

ಇದೇ ವೇಳೆ, ಪಠ್ಯಕ್ಕೆ ತಮ್ಮ ಬರಹ ಸೇರಿಸಲು ಕೊಟ್ಟಿದ್ದ ಅನುಮತಿ ಹಿಂಪಡೆಯುವೆ ಎಂಬ ದೇವನೂರು ಮಹಾದೇವ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಈಗಾಗಲೇ, ಪಠ್ಯ ಮುದ್ರಣವಾಗಿ ವಿತರಿಸಲಾಗುತ್ತಿದೆ. ಅವರು ಯಾರ ಒತ್ತಡದಿಂದ ಈ ರೀತಿ ಅನುಮತಿ ನಿರಾಕರಿಸಿದ್ದಾರೆಂದು ಗೊತ್ತಿಲ್ಲ. ಅವರ ಬುದ್ಧಿವಂತಿಕೆ, ಹೋರಾಟದ ಬಗ್ಗೆ ಅಪಾರ ಕಳಕಳಿ ಇದ್ದು, ಅವರನ್ನು ಭೇಟಿ ಮಾಡುತ್ತೇನೆ ಎಂದರು.

ಮೊಸರಲ್ಲಿ ಕಲ್ಲು ಹುಡುಕುವ ಹೆಚ್​​ಡಿಕೆ : ಮಳಲಿ ಮಂದಿರದ ತಾಂಬೂಲ ಪ್ರಶ್ನೆ ಕೇಶವ ಕೃಪಾದಲ್ಲಿ ನಿರ್ಧಾರವಾಗಿದೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ ಸಚಿವ ನಾಗೇಶ್​​, 'ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವಂತೆ' ಹೆಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾರೆ. ವಾರಾಣಸಿ ಮಸೀದಿ ವಿಚಾರ ಹಾಗಾದರೆ ನಾಗಪುರದಲ್ಲಿ ನಿರ್ಧಾರವಾಯಿತೇ?, ಸರ್ವೇ ಪ್ರಕಾರ ಮುಸ್ಲಿಂಮರು ಕೂಡ ಬಿಜೆಪಿಯತ್ತ ಬರುತ್ತಿರುವುದರಿಂದ ಜನತಾದಳ ಮತ್ತು ಕಾಂಗ್ರೆಸ್ ವಿಚಲಿತವಾಗಿವೆ. ಆರ್​​ಎಸ್​ಎಸ್​​ ವಿರುದ್ಧ ಮಾತನಾಡಿದರೇ ಮುಸ್ಲಿಂ ಮತ ಬಲಪಡಿಸಿಕೊಳ್ಳಬಹುದೆಂಬ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಜಯೇಂದ್ರ ಟಿಕೆಟ್ ನಿರಾಕರಣೆ ವರಿಷ್ಠರ ತೀರ್ಮಾನ : ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸಿರುವುದು ಪಕ್ಷದ ಒಳಗಿನ ನಿರ್ಣಯ. ಅದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಈಗಾಗಲೇ ಸಂಘಟನೆಯ ಜವಾಬ್ದಾರಿಯನ್ನು ಅವರಿಗೆ ಕೊಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಬಗ್ಗೆ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಇದನ್ನೂ ಓದಿ:ಪರಿಷ್ಕರಣೆಗೆ ತೀವ್ರ ಪ್ರತಿರೋಧ.. ಮಕ್ಕಳಿಗೆ ಇನ್ನೂ ಸಿಗದ ಪಠ್ಯ.. ದೇವನೂರು ಬಳಿಕ ಡಾ. ಜಿ ರಾಮಕೃಷ್ಣ ತಮ್ಮ ಪಾಠ ಕೈಬಿಡಲು ಪತ್ರ..

For All Latest Updates

ABOUT THE AUTHOR

...view details