ಚಾಮರಾಜನಗರ:ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲೆಯ ಶಿವನ ದೇಗುಲಗಳಿಗೆ ಭಕ್ತ ಸಾಗರ ಹರಿದು ಬರುತ್ತಿದ್ದು, ದೇವಾಲಯಗಳ ಪ್ರಾಂಗಣಗಳು ಹೂವು, ಹಣ್ಣುಗಳಿಂದ ಸಿಂಗಾರಗೊಂಡಿವೆ.
ಬುಧವಾರ ರಾತ್ರಿಯಿಂದಲೇ ಪವಾಡ ಪುರುಷ ಮಹದೇಶ್ವರನ ಸನ್ನಿಧಿಯಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ಹಣ್ಣು - ಹೂವು, ವಿದ್ಯುತ್ ದೀಪಗಳಿಂದ ಶ್ರೀಕ್ಷೇತ್ರ ಅಲಂಕೃತಗೊಂಡಿದೆ.
ಚಾಮರಾಜನಗರದ ಶಿವನ ದೇಗುಲಗಳಲ್ಲಿ ಹಬ್ಬದ ಸಂಭ್ರಮ ಇಂದು ಬೆಳಗ್ಗೆಯಿಂದಲೇ ಮಾದಪ್ಪನಿಗೆ ಆಗಮಿಕರಾದ ಕರವೀರಸ್ವಾಮಿ ನೇತೃತ್ವದಲ್ಲಿ ದೇವರಿಗೆ ಬಿಲ್ವಾರ್ಚನೆ, ಪುಷ್ಪಾರ್ಚನೆ, ರುದ್ರಾಭಿಷೇಕ ಮಾಡಿ, ಶಿವಲಿಂಗಕ್ಕೆ ಕೊಳಗ ಧರಿಸಿದ್ದಾರೆ.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಶ್ರೀ ಚಾಮರಾಜೇಶ್ವರನಿಗೂ ಕೂಡ ವಿಶೇಷ ಪೂಜೆಗಳು ನಡೆಯುತ್ತಿದ್ದು ಶಿವಲಿಂಗಕ್ಕೆ ಬೆಳ್ಳಿಯ ಮುಖವಾಡ ಧರಿಸಿ, ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ.
ರಾಜತ್ವದೊಂದಿಗೆ ಈಶ್ವರತ್ವ ಹೊಂದಿರುವ ಅಪರೂಪದ ಶ್ರೀ ಚಾಮರಾಜೇಶ್ವರಸ್ವಾಮಿಯ ದರ್ಶನ ಭಾಗ್ಯದಿಂದ ಸಕಲ ಇಷ್ಟಾರ್ಥ ನೆರವೇರಲಿದೆ ಎನ್ನುವ ನಂಬಿಕೆ ಇರುವುದರಿಂದ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರಿನ ವಿವಿಧ ಶಿವಾಲಯಗಳಲ್ಲಿ ದೇವರಿಗೆ ಅಭಿಷೇಕ, ವಿಶೇಷ ಪೂಜೆ ನಡೆದಿದ್ದು ಜಾಗರಣೆ ಮಾಡಲು ಸಕಲ ತಯಾರಿಯೂ ನಡೆದಿದೆ.