ಚಾಮರಾಜನಗರ: ಚಾಮರಾಜನಗರ ನೂತನ ಜಿಲ್ಲಾಧಿಕಾರಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ. ಡಿ.ಎಸ್. ರಮೇಶ್ ವರ್ಗಾವಣೆ ಆದ ಬಳಿಕ ಕಳೆದ 1 ವಾರಗಳಿಂದ ಜಿಪಂ ಸಿಇಒ ಪೂವಿತಾ ಅವರೇ ಪ್ರಭಾರ ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ನೂತನ ಡಿಸಿಯನ್ನಾಗಿ ಶಿಲ್ಪಾ ನಾಗ್ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಇನ್ನು, ಜಿಲ್ಲಾಧಿಕಾರಿ ಆಗಿ ಶಿಲ್ಪಾ ನಾಗ್ ನೇಮಕವಾದ ಬಳಿಕ ಪ್ರಮುಖ ಉನ್ನತ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳು ನೇಮಕವಾದಂತಾಗಿದ್ದು, ಸ್ತ್ರೀ ಶಕ್ತಿ ಕಂಡು ಬಂದಿದೆ. ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಶಿಲ್ಪಾ ನಾಗ್ ನೇಮಕವಾಗಿದ್ದರೆ, ಪೊಲೀಸ್ ವರಿಷ್ಠಾಧಿಕಾರಿಯಾಗಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಗೀತಾ ಹುಡೇದ, ಜಿಪಂ ಸಿಇಒ ಆಗಿ ಪೂವಿತಾ, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಆಗಿ ದೀಪ್ ಜೆ. ಕಂಟ್ರಾಕ್ಟರ್ ಈಗಾಗಲೇ ಆಡಳಿತ ನಡೆಸುತ್ತಿದ್ದಾರೆ.
ಇನ್ನು, ಈಗ ನೇಮಕವಾದ ಶಿಲ್ಪಾ ನಾಗ್ ಈ ಹಿಂದೆ ಚಾಮರಾಜನಗರ ಜಿಪಂ ಸಿಇಒ ಆಗಿ ಕೂಡ ಕಾರ್ಯ ನಿರ್ವಹಿಸಿದ್ದು, ಜನ ಮೆಚ್ಚುಗೆ ಗಳಿಸಿದ್ದರು. ನರೇಗಾಗೆ ಶಕ್ತಿ ತುಂಬುವ ಸಲುವಾಗಿ ತಾವೇ ಒಮ್ಮೆ ಬಾಂಡ್ಲಿಯಲ್ಲಿ ಮಣ್ಣು ಹೊತ್ತು ಗಮನ ಸೆಳೆದಿದ್ದರು.