ಕರ್ನಾಟಕ

karnataka

ETV Bharat / state

ಕೆ.ಗುಡಿಯಲ್ಲೇ ಆನೆ ಶಿಬಿರ... ಗಜಪಡೆ ಕಲರವಕ್ಕಿಲ್ಲ ಯಾವುದೇ ಭಂಗ! - Shifting to bhudipadaga Elephant Camp K.gudi

ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲೇ ಆನೆ ಶಿಬಿರ ಮುಂದುರಿಯುವುದು ಸೂಕ್ತ ಎಂಬ ಅಭಿಪ್ರಾಯ ಬಂದಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಆರ್​ಟಿ ಡಿಸಿಎಫ್ ಸಂತೋಷ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಆನೆ ಶಿಬಿರ
ಆನೆ ಶಿಬಿರ

By

Published : Sep 24, 2021, 1:13 PM IST

ಚಾಮರಾಜನಗರ: ಕಳೆದ ಸಾಲಿನ ಬಜೆಟ್​ನಲ್ಲಿ ಘೋಷಿಸಿದ್ದ ಬೂದಿಪಡಗ ಆನೆ ಶಿಬಿರ ಸ್ಥಾಪನೆಯನ್ನು ಕೆ.ಗುಡಿಯಲ್ಲಿ ಮಾಡಬೇಕೆಂದು ತಜ್ಞರ ಸಮಿತಿ ನಿರ್ಧರಿಸಿದ್ದು, ಈ ಕುರಿತಾದ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಪರಿಸರ ಪ್ರವಾಸೋದ್ಯಮದ ಭಾಗವಾಗಿ ಚಾಮರಾಜನಗರ ತಾಲೂಕಿನ‌ ಬೂದಿಪಡಗದಲ್ಲಿ ಆನೆ ಶಿಬಿರ ಸ್ಥಾಪನೆಗೆ ಬಜೆಟ್​ನಲ್ಲಿ ಎರಡು ಕೋಟಿ ರೂ. ಅನುದಾನ ಘೋಷಿಸಿದ್ದರು.‌

ಆದರೆ, ಬೂದಿಪಡಗದಲ್ಲಿ ಆನೆಗಳಿಗೆ ಸಾಕಾಗುವಷ್ಟು ಆಹಾರ ಮತ್ತು ನೀರಿನ‌ ಕೊರತೆ ಇರುವ ಹಿನ್ನೆಲೆಯಲ್ಲಿ ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಕೆ.ಗುಡಿಯಲ್ಲೇ ಆನೆ ಶಿಬಿರ ಮುಂದುವರೆಸಲು ನಿವೃತ್ತ ವೈದ್ಯರು, ಕಾವಾಡಿಗಳು, ಪರಿಸರ ತಜ್ಞರು ವರದಿ ತಯಾರಿಸಿ ನೀಡಿದ್ದು, ಅದರಂತೆ ಅರಣ್ಯ ಇಲಾಖೆ ಕೆ.ಗುಡಿಯಲ್ಲಿ‌ ಶಿಬಿರ ಮುಂದುವರಿಸುವ ಪ್ರಸ್ತಾಪ ಸಲ್ಲಿಸಿದೆ.

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಬಿಆರ್​ಟಿ ಡಿಸಿಎಫ್ ಸಂತೋಷ್

ಕೆ.ಗುಡಿಯಲ್ಲೇ ಆನೆ ಶಿಬಿರ ಮುಂದುವರೆಯುವುದರಿಂದ ಮಾವುತರು, ಕಾವಾಡಿಗಳಿಗೆ ವಸತಿಗೃಹ, ಆನೆಗಳ‌ ಅಡುಗೆ ಮನೆಯನ್ನು ಹೊಸದಾಗಿ ನಿರ್ಮಾಣ ಮಾಡಬೇಕಾದ ಅಗತ್ಯ ಇರುವುದಿಲ್ಲ. ಜೊತೆಗೆ, ಗಜಪಡೆಗಳಿಗೆ ಆಹಾರ, ನೀರಿನ‌ ಕೊರತೆಯು ಉಂಟಾಗುವುದಿಲ್ಲ ಎಂಬದು ತಜ್ಞರ ವಾದ. ಈಗಾಗಲೇ ಇರುವ ಸಫಾರಿ ಕೇಂದ್ರಕ್ಕೆ ಪ್ರವಾಸಿಗರನ್ನು ಸೆಳೆಯಲು ಆನೆ ಶಿಬಿರ ವರದಾನವಾಗಲಿದೆ.

4 ಸ್ಥಳ‌ ಗುರುತು:

ಈ ಕುರಿತು ಬಿಆರ್​ಟಿ ಡಿಸಿಎಫ್ ಸಂತೋಷ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಸರ್ಕಾರ ಆನೆ ಶಿಬಿರ ಪ್ರಕಟ ಮಾಡುತ್ತಿದ್ದಂತೆ ತಜ್ಞರ ಸಮಿತಿಗೆ ಬೂದಿಪಡಗ, ಬೆಲ್ಲತ್ತ, ಸುವರ್ಣಾವತಿ ಹಿನ್ನೀರು ಹಾಗೂ ಕೆ.ಗುಡಿ ಹೆಸರುಗಳನ್ನು ಗುರುತು ಮಾಡಲಾಗಿತ್ತು.‌ ಅದರಂತೆ, ಎಲ್ಲ ಸ್ಥಳಗಳ ಪರಿಶೀಲನೆ ಬಳಿಕ ಕೆ.ಗುಡಿಯಲ್ಲೇ ಆನೆ ಶಿಬಿರ ಆರಂಭಿಸುವುದು ಸೂಕ್ತ ಎಂಬ ಅಭಿಪ್ರಾಯ ಬಂದಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೂದಿಪಡಗದಲ್ಲಿ ಮಾಡಬೇಕೆಂದುಕೊಂಡಿದ್ದ ಆನೆ ಶಿಬಿರ ಕೆ.ಗುಡಿಯಲ್ಲೇ ಮುಂದುವರೆಯಲಿದೆ ಎಂದು ತಿಳಿಸಿದರು.

ಕೆ.ಗುಡಿಗೆ ಕನಿಷ್ಠ 5 ಆನೆಗಳನ್ನು ಕರೆತರಲಿದ್ದು, ಗಜಪಡೆಯನ್ನು ಕಣ್ತುಂಬಿಕೊಳ್ಳಲು ಮರದ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ಯೋಜಿಸಲಾಗಿದೆ.‌ ನಮ್ಮಲ್ಲೇ ಆನೆ ಶಿಬಿರವಾದಾಗ ಹುಲಿ ಸೆರೆ, ಕಾಡಾನೆ ಸೆರೆ ಕಾರ್ಯಾಚರಣೆಗೆ ಬೇರೆ ಕಡೆಯಿಂದ ಆನೆಗಳನ್ನು ಕರೆತರುವುದು ತಪ್ಪಲಿದೆ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details