ಚಾಮರಾಜನಗರ: ವಿಧಾನಸಭಾ ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ಅಖಾಡ ರಂಗೇರುತ್ತಿದೆ. ಒಂದು ಕಡೆ ಘಟಾನುಘಟಿ ರಾಜಕೀಯ ನಾಯಕರು ಚುನಾವಣಾ ಕಣಕ್ಕೆ ಇಳಿಯಲು ಸಿದ್ದತೆ ನಡೆಸಿದ್ದರೆ, ಮತ್ತೊಂದು ಕಡೆ ಸಾಮಾನ್ಯ ಜನರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲು ಸಜ್ಜಾಗಿದ್ದಾರೆ. ಈ ಬಾರಿ ಕೂಡ ಘಟಾನುಘಟಿ ನಾಯಕರ ನಡುವೆ ಅನೇಕ ಸಾಮಾನ್ಯ ಜನರು ಚುನಾವಣೆ ಎದುರಿಸಲಿದ್ದಾರೆ. ಯಾವುದೇ ಕ್ಷೇತ್ರ ಒಂದು ಪಕ್ಷದ ಭದ್ರಕೋಟೆ ಎಂಬ ಮಾನದಂಡಕ್ಕಿಂತ ಜನರು ತಮಗೂ ಒಂದು ಬಾರಿ ಅವಕಾಶ ಕೊಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ ನಿವೃತ್ತ ಯೋಧ, ಅರ್ಚಕ, ಎಂಜನಿಯರ್, ರೈತ ಮುಖಂಡರು, ಉದ್ಯಮಿಗಳು.
ಕೆಆರ್ಎಸ್ ನಿಂದ ಅರ್ಚಕ ಅಭ್ಯರ್ಥಿ:ಕರ್ನಾಟಕ ರಾಷ್ಟ್ರೀಯ ಸಮಿತಿಸ್ಥಾಪನೆಗೊಂಡ ಕೆಲವೇ ವರ್ಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿ ಜನರ ನಂಬಿಕೆ ಗಳಿಸುತ್ತಿದೆ. ಈ ಕೆಆರ್ಎಸ್ ಪಕ್ಷದಿಂದ ಚಾಮರಾಜನಗರ ಕ್ಷೇತ್ರದಲ್ಲಿ ಶ್ರೀನಿವಾಸಶಾಸ್ತ್ರಿ ಅಭ್ಯರ್ಥಿ ಆಗುತ್ತಿದ್ದಾರೆ. ಕೊಳ್ಳೇಗಾಲದ ಮರಡಿಗುಡ್ಡದ ಅರ್ಚಕರಾಗಿರುವ ಶ್ರೀನಿವಾಸ್ ಶಾಸ್ತ್ರಿ ಇದೇ ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಲು ಮುಂದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿ, ಜನರನ್ನು ಸೆಳೆಯುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಕೆಆರ್ಎಸ್ ಪಕ್ಷ ಈ ಬಾರಿ ಚುನಾವಣಾ ರಾಜಕಾರಣದಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ.
ರಾಜಕೀಯಕ್ಕಿಳಿದ ರೈತ ಮುಖಂಡರು:ನಿರಂತರ ಹೋರಾಟ, ರೈತ ಸಂಘದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಡಾ. ಗುರುಪ್ರಸಾದ್ ಚಾಮರಾಜನಗರದಿಂದ ಹಾಗೂ ಕಡಬೂರು ಮಂಜುನಾಥ್ ಗುಂಡ್ಲುಪೇಟೆ ಕ್ಷೇತ್ರದಿಂದ ಬೇರೆ ಬೇರೆ ಪಕ್ಷಗಳಡಿ ಸ್ಪರ್ಧಿಸಲು ಮುಂದಾಗಿದ್ದಾರೆ. ಡಾ.ಗುರುಪ್ರಸಾದ್ ಪಿಎಚ್ಡಿ ಪದವೀಧರರಾಗಿದ್ದು, ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ರೈತ ಹೋರಾಟದಲ್ಲಿ ಮುಂಚೂಣಿ ಹೆಸರನ್ನು ಪಡೆದಿದ್ದಾರೆ. ಎಎಪಿ ಪಕ್ಷದಿಂದ ಸಂಭಾವ್ಯ ಅಭ್ಯರ್ಥಿಯಾಗಿದ್ದು, ಒಂದು ವೇಳೆ ರಾಜ್ಯ ರೈತ ಸಂಘವು ಸ್ವತಂತ್ರವಾಗಿ ಸ್ಪರ್ಧೆಗಿಳಿದರೇ ರೈತ ಸಂಘದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಪಕ್ಷ ಇನ್ನೂ ನಿರ್ಧರವಾಗದಿದ್ದರೂ ಸ್ಪರ್ಧಿಸುವುದು ಸ್ಪಷ್ಟವಾಗಿದೆ.
ಕಡಬೂರು ಮಂಜುನಾಥ್ ಅವರು ಕೂಡ ರೈತ ಮುಖಂಡರಾಗಿದ್ದು ಆದರ್ಶದ ವಿವಾಹ ಮಾಡಿಕೊಂಡು ಗಮನ ಸೆಳೆದ ಯುವ ಮುಖಂಡರಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ಹಣಾಹಣಿ ಎನ್ನುತ್ತಿದ್ದ ಗುಂಡ್ಲುಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದ ದಿಕ್ಕನ್ನು ಬದಲಿಸಿರುವ ಅಭ್ಯರ್ಥಿಯಾಗಿದ್ದಾರೆ.