ಚಾಮರಾಜನಗರ: ಕೋವಿಡ್ ಎರಡನೇ ಅಲೆ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಗ್ರಾಮದಿಂದ ಹೊರ ಗ್ರಾಮಕ್ಕೆ ಹೋಗದಂತೆ, ನೆಂಟರಿಷ್ಟರು ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ನೀಡಿರುವ ಫೈನಾನ್ಸ್ನವರು ತಮ್ಮ ಗ್ರಾಮಕ್ಕೆ ಬರದಂತೆ ಸ್ವಯಂ ಲಾಕ್ಡೌನ್ ವಿಧಿಸಿಕೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ನಡೆದಿದೆ.
ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದೆ. ಗ್ರಾಮದವರು ಬೆಂಗಳೂರು, ಮೈಸೂರು ಹಾಗೂ ಇನ್ನಿತರೆ ನಗರಗಳಲ್ಲಿ ವಾಸ ಮಾಡುತ್ತಿದ್ದು, ಇವರು ಗ್ರಾಮಕ್ಕೆ ಬಾರದಂತೆ ಹಾಗೂ ಗ್ರಾಮದಿಂದ ಸಾರ್ವಜನಿಕರು ಬೇರೆ ಗ್ರಾಮಕ್ಕೆ ಹೋಗದಂತೆ ಕಟ್ಟಾಜ್ಞೆ ಹೊರಡಿಸಲಾಗಿದೆ.
ವಿವಿಧ ಕಂಪನಿಯ ಫೈನಾನ್ಸ್ ಪ್ರತಿನಿಧಿಗಳು ಪ್ರತಿ ದಿನ ಗ್ರಾಮದ ಸ್ವಸಹಾಯ ಸಂಘಗಳಿಂದ ಹಣ ವಸೂಲಿ ಮಾಡಲು ಆಗಮಿಸುತ್ತಿದ್ದು, ಇವರು ಸಹ ಕೊರೊನಾ ಆತಂಕ ಕಡಿಮೆಯಾಗುವರೆಗೂ ಗ್ರಾಮದ ಒಳಗೆ ಬಾರಬಾರದೆಂದು ಮನವಿ ಮಾಡಿಕೊಳ್ಳುವ ಮೂಲಕ ಗ್ರಾಮಸ್ಥರು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಪ್ರಯಾಣಿಕರ ಸಮಸ್ಯೆ ಆಲಿಸಲು ಮೆಜೆಸ್ಟಿಕ್ಗೆ ಬಂದ ಸಚಿವ ಲಕ್ಷ್ಮಣ ಸವದಿ
ಕೊರೊನಾ ವೈರಸ್ ಲಕ್ಷಣ ಕಂಡು ಬಂದಲ್ಲಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಬೆಕು. ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಪ್ರತಿಯೊಬ್ಬರು ಗುಂಪು ಸೇರದೆ ಮಾಸ್ಕ್ ಹಾಕಿಕೊಂಡು ತಮ್ಮ ಕೆಲಸ ಕಾರ್ಯಗಳನ್ನು ಮಾಡುವಂತೆ ಗ್ರಾಮದ ಯಜಮಾನರು ಗ್ರಾಮಸ್ಥರಿಗೆ ತಿಳಿಸಿದ್ದಾರೆ.