ಚಾಮರಾಜನಗರ: ನೆಚ್ಚಿನ ಮೇಷ್ಟು ದಿಢೀರ್ ವರ್ಗಾವಣೆ ಆಗಿರುವುದನ್ನು ತಿಳಿದ ಶಾಲಾ ಮಕ್ಕಳು ರೋಧಿಸಿ, ಪ್ರತಿಭಟನೆ ನಡೆಸಿರುವ ಘಟನೆ ಹನೂರು ತಾಲೂಕಿನ ಮೀಣ್ಯಂನಲ್ಲಿ ನಡೆದಿದೆ.
ಹನೂರು ತಾಲೂಕಿನ ಮೀಣ್ಯಂ ಶಾಲೆ ಮಕ್ಕಳ ಪ್ರತಿಭಟನೆ ಪಿ.ಮಹಾದೇವಸ್ವಾಮಿ ಎಂಬುವವರನ್ನು ಮೀಣ್ಯಂ ಶಾಲೆಯಿಂದ ಲೊಕ್ಕನಹಳ್ಳಿ ಶಾಲೆಗೆ ದಿಢೀರ್ ಆಗಿ ವರ್ಗಾವಣೆ ಮಾಡಿದ ಸುದ್ದಿ ಕೇಳಿದ ವಿದ್ಯಾರ್ಥಿಗಳು, ನೆಚ್ಚಿನ ಶಿಕ್ಷಕರು ಬೇಕೇ ಬೇಕೆಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಗ್ರಾಮಸ್ಥರೂ ಸಹ ಇದಕ್ಕೆ ಧ್ವನಿಗೂಡಿಸಿದರು. ತಮ್ಮ ಶಾಲೆಗೆ ಮತ್ತೇ ಮಹಾದೇವಸ್ವಾಮಿ ನಿಯೋಜನೆ ಆಗದಿದ್ದರೇ ಶನಿವಾರದಿಂದ ಯಾರೂ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಎಚ್ಚರಿಕೆ ನೀಡಿದ್ದಾರೆ.
ಇನ್ನು ವರ್ಗಾವಣೆಯಾದ ಪಿ.ಮಹಾದೇವಸ್ವಾಮಿ ಕಳೆದ 4 ವರ್ಷದಿಂದ ಮೀಣ್ಯಂ ಶಾಲೆಯಲ್ಲಿದ್ದು ಕನ್ನಡ, ಇಂಗ್ಲಿಷ್ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರಿಂದ ಅದರ ಜವಾಬ್ದಾರಿಯನ್ನು ಹೊತ್ತಿದ್ದರು. ಇದರೊಟ್ಟಿಗೆ ಬಿಸಿಯೂಟದ ಮೇಲ್ವಿಚಾರಣೆಯನ್ನು ವಹಿಸಿಕೊಂಡು ಮಕ್ಕಳಿಗೆ ಶುಚಿ-ರುಚಿಯಾದ ಬಿಸಿಯೂಟ ಸಿಗುವಂತೆ ಮಾಡಿದ್ದರು ಎಂದು ಗ್ರಾಮಸ್ಥ ಮಾದೇಶ್ ತಿಳಿಸಿದ್ದಾರೆ.
ಪಿ.ಮಹಾದೇವಸ್ವಾಮಿ ಅವರ ವರ್ಗಾವಣೆಯಲ್ಲಿ ಮುಖ್ಯ ಶಿಕ್ಷಕ ಬಾಲುನಾಯ್ಕ ಎಂಬವವರರು ಪ್ರಭಾವ ಬೀರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಶನಿವಾರ ಇಲ್ಲವೇ, ಭಾನುವಾರ ಪ್ರತಿಭಟನೆ ನಡೆಸಿ ಶಿಕ್ಷಕರನ್ನು ಪುನರ್ ನಿಯೋಜಿಸುವಂತೆ ಒತ್ತಾಯಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.