ಚಾಮರಾಜನಗರ: ಶಾಲೆಯ ಹೆಸರು ಬದಲಾಗಿದ್ದಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಪಾಲಕರು ಶಾಲೆಯನ್ನು ಬಹಿಷ್ಕರಿಸಿರುವ ಘಟನೆ ಹನೂರು ತಾಲೂಕಲ್ಲಿ ನಡೆದಿದೆ. ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ನಾಮಫಲಕದಲ್ಲಿ ಮೈಸೂರಪ್ಪನ ದೊಡ್ಡಿಯ ಬದಲಾಗಿ ಹೊಸದೊಡ್ಡಿ ಎಂದು ನಮೂದಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಶಾಲೆಗೆ ತೆರಳದೇ ತರಗತಿ ಬಹಿಷ್ಕರಿಸಿದ್ದು,ಇದನ್ನು ಪಾಲಕರು ಬೆಂಬಲಿಸಿದ್ದಾರೆ.
ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಪ್ಪನ ದೊಡ್ಡಿಯಲ್ಲಿ ಈ ಹಿಂದೆ ಶಾಲೆ ಪ್ರಾರಂಭಿಸಲಾಗಿತ್ತು. ಆದರೆ, ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ದಾಖಲಾಗದ ಪರಿಣಾಮ ಶಾಲೆಯನ್ನು 40 ವರ್ಷಗಳ ಹಿಂದೆಯೇ ಮುಚ್ಚಲಾಗಿತ್ತು. ನಂತರ ಈ ಶಾಲೆಯನ್ನು ಹೊಸದೊಡ್ಡಿ ಗ್ರಾಮಕ್ಕೆ ಸ್ಥಳಾಂತರಿಸುವುದರ ಮೂಲಕ ಇಲ್ಲಿನ ವಿದ್ಯಾರ್ಥಿಗಳನ್ನು ಹೊಸದೊಡ್ಡಿ ಶಾಲೆಗೆ ವರ್ಗಾಯಿಸಲಾಗಿತ್ತು.
ವರ್ಗಾಯಿಸಿ 35 ವರ್ಷಗಳು ಕಳೆದರೂ ಸಹ ಶಾಲೆಯ ಹೆಸರನ್ನು ಮೈಸೂರಪ್ಪನ ದೊಡ್ಡಿ ಗ್ರಾಮ ಎಂದೇ ನಾಮಫಲಕದಲ್ಲಿ ಹಾಕಲಾಗಿದೆ. ಇದರಿಂದ ಬೇಸತ್ತ ಹೊಸದೊಡ್ಡಿ ಗ್ರಾಮದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಲೆಯನ್ನೇ ಎರಡು ದಿನಗಳಿಂದ ಬಹಿಷ್ಕರಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ಶಾಲೆಯಲ್ಲಿ 1 ತರಗತಿಯಿಂದ 5ನೇ ತರಗತಿಯವರೆಗೆ 20 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಬಾರದ ಹಿನ್ನೆಲೆ ಶಿಕ್ಷಕರು ಪೋಷಕರ ಮನವೊಲಿಸಲು ಮುಂದಾದರೂ ಮಕ್ಕಳು, ಪಾಲಕರು ಜಗ್ಗಿಲ್ಲ.
ಇದನ್ನೂ ಓದಿ:ನೀಟ್ ಮಾದರಿಯಲ್ಲೇ ಸಿಇಟಿ... ಹಿಜಾಬ್ ನಿಷೇಧ
ಶಾಲೆಯ ನಾಮಫಲಕವನ್ನು ಏಕಾಏಕಿ ಬದಲಾಯಿಸಲು ಸಾಧ್ಯವಿಲ್ಲ, ಗ್ರಾಮದ ಹೆಸರು ಬದಲಾವಣೆ ಸರ್ಕಾರದ ಮಟ್ಟದಲ್ಲಿ ಆಗ ಬೇಕಾಗಿರುವುದರಿಂದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಹಾಜರಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಗ್ರಾಮಕ್ಕೆ ಭೇಟಿ ನೀಡಿ ಪೋಷಕರ ಮನವೊಲಿಸಲಾಗುವುದು ಎಂದು ಹನೂರು ಬಿಇಒ ಟಿ.ಆರ್. ಸ್ವಾಮಿ ತಿಳಿಸಿದ್ದಾರೆ.