ಚಾಮರಾಜನಗರ: ಒಂದು ಕಾಲದಲ್ಲಿ ಮೊರಾರ್ಜಿ ಶಾಲೆಯಾಗಿ ನಿತ್ಯ ಮಕ್ಕಳ ಆಟ-ಪಾಠಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಜನರು ಈಗ ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಗಲಿನಲ್ಲೇ ಜೂಜಾಟ, ಕುಡಿತ ಈ ಶಾಲಾ ಕಟ್ಟಡದಲ್ಲಿ ಸಾಮಾನ್ಯವಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಚಾಮರಾಜನಗರದ ಸಂತೇಮರಹಳ್ಳಿಯ ಹೃದಯ ಭಾಗದಲ್ಲಿರುವ ರೇಷ್ಮೆ ಇಲಾಖೆಯ ಅಂದಾಜು 3 ಎಕರೆಗೂ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಜೂಜಾಟ, ಮದ್ಯ ವ್ಯಸನ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಸಂತೇಮರಹಳ್ಳಿಯಲ್ಲಿ ರೇಷ್ಮೆ ವಹಿವಾಟು ಉತ್ತಮವಾಗಿ ನಡೆಯುತ್ತಿದ್ದ ಸಮಯದಲ್ಲಿ ಗೂಡನ್ನು ಸಂಗ್ರಹಿಸಿ ಇಡಲಾಗುತ್ತಿತ್ತು. ಬಳಿಕ, ಇದೇ ಕಟ್ಟಡ ಮೊರಾರ್ಜಿ ವಸತಿ ಶಾಲೆಯಾಗಿ ಬದಲಾಯಿತು. ವಸತಿ ಶಾಲೆ ಸ್ಥಳಾಂತರವಾದ ಬಳಿಕ ಕಟ್ಟಡ ಪಾಳು ಬಿದ್ದಿದ್ದು ಬಂಗಾರದಂತಹ ಜಾಗ ಅನುಪಯುಕ್ತವಾಗಿ ಬೇಡದ ಕೆಲಸಗಳಿಗಷ್ಟೇ ಉಪಯೋಗವಾಗುತ್ತಿದೆ.