ಚಾಮರಾಜನಗರ: ಚಿಕ್ಕ ತಿರುಪತಿ ಎಂದೇ ಜನಪ್ರಿಯವಾಗಿರುವ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಹುಲುಗನ ಮುರುಡಿಯಲ್ಲಿ ನಡೆದ ಸಂಕ್ರಾಂತಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಸೂರ್ಯ ಪಥ ಬದಲಿಸುವ ದಿನದಂದು ನಡೆಯುವ ರಥೋತ್ಸವದಲ್ಲಿ ಸಹಸ್ರಾರು ಮಂದಿ ಭಕ್ತರು ದೂರದ ಬೆಂಗಳೂರು, ತಾಳವಾಡಿ, ಮಂಡ್ಯ ಸೇರಿದೆಂತೆ ರಾಜ್ಯದ ಹಲವು ಭಾಗಗಳಿಂದ ಬಂದು ಚಿಕ್ಕ ತಿರುಪತಿಯಲ್ಲಿರುವ ವೆಂಕಟರಮಣನಿಗೆ ನಮಿಸಿ ಪ್ರಾರ್ಥಿಸಿದರು.
ಗುಂಡ್ಲುಪೇಟೆ ತಾಲೂಕಿನ ತಹಸೀಲ್ದಾರ್ ಸಿ.ಜಿ ರವಿಶಂಕರ್ ಅವರು ವೆಂಕಟರಮಣಸ್ವಾಮಿ ದೇವರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ವರಾಹ ಪುರಾಣದಲ್ಲಿ ಈ ದೇಗುಲದ ಉಲ್ಲೇಖವಿದ್ದು ಮಾಂಡವ್ಯ ಮಹರ್ಷಿಗಳು ಈ ದೇವಸ್ಥಾನವನ್ನು ಸ್ಥಾಪಿಸಿದ್ದಾರೆಂಬ ನಂಬಿಕೆ ಇದೆ. ಅದರಂತೆ, ದೇವರ ಪಾದದ ಬಳಿ ಯಾವಾಗಲೂ ಕಪ್ಪೆಯೊಂದು ಕುಳಿತುಕೊಳ್ಳಲಿದ್ದು ಮಹರ್ಷಿಗಳೇ ದೇವಸ್ಥಾನದಲ್ಲಿದ್ದಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.
ವರ್ಷದ ಮೊದಲ ಹಬ್ಬದಲ್ಲಿ ನಡೆಯುವ ವರ್ಷದ ಮೊದಲ ಜಾತ್ರೆ ಅದ್ಧೂರಿಯಾಗಿ ನೆರವೇರಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಸಂಕ್ರಾತಿ ಹಬ್ಬವನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ವಿಶೇಷ ಹಬ್ಬ, ರೈತರು ತಾವು ಬೆಳೆದ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಪೂಜೆ ಸಲ್ಲಿಸುವ ಆಚರಣೆ ಆಗಿದೆ. ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲದೆ, ನಗರಗಳಲ್ಲೂ ಆಚರಿಸಲಾಗುತ್ತದೆ.
ಹುಂಡಿ ಕಳವಿಗೆ ಬಂದು ಕಾಲ್ಕಿತ್ತ ಕಳ್ಳ:ಹುಂಡಿ ಕಳ್ಳತನ ಮಾಡಲುದೇವಾಲಯಕ್ಕೆ ಬಂದು ಕಳವಿಗೆ ವಿಫಲ ಪ್ರಯತ್ನ ನಡೆಸಿರುವ ಘಟನೆ ಚಾಮರಾಜನಗರದ ಹೌಸಿಂಗ್ ಬೋರ್ಡ್ ಉರ್ಕಾತೇಶ್ವರಿ ದೇವಾಲಯದಲ್ಲಿ ನಡೆದಿದೆ. ಖದೀಮನೋರ್ವ ದೇವಾಲಯಕ್ಕೆ ಬಂದು ಹುಂಡಿ ಕಳವು ಮಾಡಿ ಬಳಿಕ ಯಾರೋ ಬಂದರೆಂದು ಕದ್ದಿರುವುದನ್ನು ದೇವಾಲಯದ ಹಿಂಭಾಗ ಬಿಸಾಡಿ ಪರಾರಿಯಾಗಿದ್ದಾನೆ. ಸದ್ಯ, ಹುಂಡಿ ಬಿದ್ದು ಹಣ ಚೆಲ್ಲಾಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿನೆ ನಡೆಸಿದ್ದಾರೆ. ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.