ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲದಲ್ಲಿ 3 ಪ್ರತ್ಯೇಕ ಪ್ರಕರಣದಲ್ಲಿ ಶ್ರೀಗಂಧ ಸಾಗಣೆ, ಜಿಂಕೆ ಬುರುಡೆ ಮಾರಾಟ ಹಾಗೂ ಜಿಂಕೆ ಮಾಂಸ ಸಾಗಿಸುತ್ತಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಮೊದಲ ಪ್ರಕರಣದಲ್ಲಿ ಜಿಂಕೆ ಬುರುಡೆ ಸಮೇತ ಕೊಂಬುಗಳನ್ನು ಮಾರಾಟ ಮಾಡಲು ಬಂದು ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಲ್ಲಿ ಶನಿವಾರ ಸಂಜೆ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ಗ್ರಾಮದ ಹಾಲುಮದಿಯಯ್ಯ (40) ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಮಹಾದೇವನಾಯಕ ಬಂಧಿತ ಆರೋಪಿಗಳು.
ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಇವರು ಜಿಂಕೆಯ ಬುರುಡೆಗಳನ್ನು ತರುತ್ತಿದ್ದಾಗ ಪೊಲೀಸ್ ಅರಣ್ಯ ಸಂಚಾರಿ ದಳವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ. ಬಂಧಿತರಿಂದ ಕೊಂಬು ಸಮೇತ ಎರಡು ಜಿಂಕೆ ಬುರುಡೆಗಳು, 2 ಮೊಬೈಲ್ ಹಾಗೂ 750 ರೂ. ಹಣವನ್ನು ವಶಕ್ಕೆ ಪಡೆದು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನು ಓದಿ:ಕೋವಿಡ್ ವೇಳೆ ಭ್ರಷ್ಟಾಚಾರ, ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆಗೆ ಸೂಚನೆ: ಸಚಿವ ಗುಂಡೂರಾವ್
ಶ್ರೀಗಂಧ ಸಾಗಣೆ- ಆರೋಪಿಗಳಿಬ್ಬರು ಪರಾರಿ:ಶ್ರೀಗಂಧ ಮರದ ತುಂಡುಗಳನ್ನು ಸಾಗಣೆ ಮಾಡುತ್ತಿದ್ದ ಘಟನೆ ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಗ್ರಾಮದ ಬ್ರಿಡ್ಜ್ ಬಳಿ ಶನಿವಾರ ಸಂಜೆ ನಡೆದಿತ್ತು. ಪ್ರಕರಣದ ಆರೋಪಿ ಮೈಸೂರು ಮೂಲದ ಜಾಫರ್ ಷರೀಪ್ ಹಾಗೂ ಮತ್ತೋರ್ವ ಪರಾರಿಯಾಗಿದ್ದ. ಅಕ್ರಮ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮಾರುತಿ ಓಮಿನಿ ಕಾರಿನಲ್ಲಿ ಶ್ರೀಗಂಧ ಸಾಗಾಟ ಮಾಡುತ್ತಿದ್ದಾಗ ಕೊಳ್ಳೇಗಾಲ ಬಫರ್ ವಲಯ ಹಾಗೂ ಕೊಳ್ಳೇಗಾಲ ವೈಲ್ಡ್ ಲೈಫ್ನ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣ ಪತ್ತೆ ಹಚ್ಚಿದ್ದರು.