ಕೊಳ್ಳೇಗಾಲ:ಕಳೆದ 5 ವರ್ಷದಿಂದಲೂ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ವಿವಿಧೆಡೆ ಅಕ್ರಮವಾಗಿ ಕಾಡಿನೊಳಗೆ ನುಸುಳಿ ಅಲ್ಲಿಯೇ ಉಳಿದು, ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಏಡುಕೊಂಡಲು ನೇತೃತ್ವದ ತಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಹನೂರು ತಾಲೂಕಿನ ಕೆ.ಕೆ ಡ್ಯಾಂ ಗ್ರಾಮದ ಮಾದೇವ (30) ಬಂಧಿತ ಆರೋಪಿಯಾಗಿದ್ದಾನೆ. ಕುಂಬೇಗೌಡ (60), ಕಂಚಗಳ್ಳಿ ಗ್ರಾಮದ ರಂಗ( 30), ದೊಡ್ಡಿಂದವಾಡಿ ಗ್ರಾಮದ ಅಬ್ದುಲ್ ಜಾಬೀರ್ ಪಾರಾರಿಯಾಗಿರುವ ಆರೋಪಿಗಳಾಗಿದ್ದಾರೆ.
ಘಟನೆ ವಿವಿರ:ಪಿ.ಜಿ ಪಾಳ್ಯ ಗ್ರಾಮದ ಅರಣ್ಯ ಪ್ರದೇಶ ವಲಯದ ಮಾರ್ಗವಾಗಿ ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ತಿಳಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತು. ಈ ವೇಳೆ ಮಾದೇವ ಎಂಬ ಆರೋಪಿ ಸಿಕ್ಕಿ ಬಿದ್ದಿದ್ದು. ಮೂವರು ಪರಾರಿಯಾಗಿದ್ದಾರೆ.
ತನಿಖೆ ವೇಳೆ 5 ವರ್ಷದಿಂದಲೂ ಈ ತಂಡ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ವಿವಿಧೆಡೆ ಅಕ್ರಮವಾಗಿ ಕಾಡಿನೊಳಗೆ ನುಸುಳಿ ಕೆಲವು ದಿನ ಅಲ್ಲೇ ಉಳಿದು ಶ್ರೀಗಂಧ ಮರ ಪತ್ತೆ ಹಚ್ಚಿ, ತುಂಡುಗಳಾಗಿ ಪರಿವರ್ತಿಸಿ ನಂತರ ಕಾಲು ನಡಿಗೆಯಲ್ಲಿಯೇ ತೆರಳಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕೃತ್ಯದಲ್ಲಿ ಆರೋಪಿಗಳು ಸಕ್ರಿಯವಾಗಿ ತೊಡಗಿದ್ದರು ಎಂದು ಈಟಿವಿ ಭಾರತಕ್ಕೆ ಆರ್ಎಫ್ಓ ಏಡುಕೊಂಡಲು ಮಾಹಿತಿ ನೀಡಿದ್ದಾರೆ.
ಬಂಧಿತನಿಂದ 16 ಕೆಜಿ ಶ್ರೀಗಂಧದ ತುಂಡುಗಳು ಹಾಗೂ ಚೆಕ್ಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಪಿ.ಜಿ ಪಾಳ್ಯ ವಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಪರಾರಿಯಾದವರ ಪತ್ತೆಗೆ ಬಲೆ ಬೀಸಲಾಗಿದೆ.