ಕರ್ನಾಟಕ

karnataka

ETV Bharat / state

ಸಾಲೂರು ಮಠದಲ್ಲಿ ಮುಗಿಯದ ವಿವಾದ: ಉತ್ತರಾಧಿಕಾರಿ ವಿಲ್ ಮಾಡಿದ ಸ್ವಾಮೀಜಿ!

ಜು.26 ರಂದು ವಿಲ್ ಮಾಡಿದ್ದು, ಆ.28 ರಂದು ಮಠದಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಸೇರಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಕುರಿತು ಸಭೆ ನಡೆದಿತ್ತು. ಆ ವೇಳೆ ವಿಷ ಪ್ರಸಾದದ ಆರೋಪಿಯಾಗಿರುವ ಇಮ್ಮಡಿ ಮಹಾದೇವಸ್ವಾಮಿ ಅವರನ್ನು ಸ್ವಾಮೀಜಿ ಸ್ಥಾನದಿಂದ ಉಚ್ಛಾಟಿಸಲಾಗಿತ್ತು.

ಉತ್ತರಾಧಿಕಾರಿ ವಿಲ್ ಮಾಡಿದ ಸ್ವಾಮೀಜಿ!

By

Published : Sep 23, 2019, 8:51 PM IST

ಚಾಮರಾಜನಗರ: ಐತಿಹಾಸಿಕ ಸಾಲೂರು ಮಠಕ್ಕೂ ವಿವಾದಗಳಿಗೂ ಗಳಸ್ಯ- ಕಂಠಸ್ಯವಾದಂತಾಗಿದ್ದು, ಭಕ್ತರ ಗಮನಕ್ಕೆ ಬಾರದೇ ಸಾಲೂರು‌ ಮಠದ ಹಿರಿಯಶ್ರೀ ಉತ್ತರಾಧಿಕಾರಿ ವಿಲ್ ಮಾಡಿದ್ದಾರೆ.

ಮಠದ ಆಂತರಿಕ ಮೂಲಗಳು ಈ ಟಿವಿ ಭಾರತಕ್ಕೆ ವಿಲ್​ನ‌ ದಾಖಲಾತಿಗಳನ್ನು ನೀಡಿದ್ದು, ಮಠದ ವಿದ್ಯಾರ್ಥಿ ನಾಗೇಂದ್ರ ಎಂಬುವರಿಗೆ ಸಾಲೂರು ಮಠದ ಪಟ್ಟ ಕಟ್ಟಬೇಕು ಎಂದು ಹಿರಿಯ ಸ್ವಾಮೀಜಿ ಗುರುಸ್ವಾಮಿ, ಮೈಸೂರಿನ ನೋಂದಣಿ ಕಚೇರಿಯಲ್ಲಿ ಕಳೆದ ಜು.26 ರಂದು ವಿಲ್ ಮಾಡಿದ್ದಾರೆ.

ಜು.26 ರಂದು ವಿಲ್ ಮಾಡಿದ್ದು, ಆ.28 ರಂದು ಮಠದಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಸೇರಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಕುರಿತು ಸಭೆ ನಡೆದಿತ್ತು. ಆ ವೇಳೆ ವಿಷ ಪ್ರಸಾದದ ಆರೋಪಿಯಾಗಿರುವ ಇಮ್ಮಡಿ ಮಹಾದೇವಸ್ವಾಮಿ ಅವರನ್ನು ಸ್ವಾಮೀಜಿ ಸ್ಥಾನದಿಂದ ಉಚ್ಛಾಟಿಸಲಾಗಿತ್ತು.

ಸಾಲೂರು ಮಠದಲ್ಲಿ ಮುಗಿಯದ ವಿವಾದ

ಉತ್ತರಾಧಿಕಾರಿ ಆಯ್ಕೆ ಸಮಿತಿಯನ್ನು ಸ್ವಾಮೀಜಿ ನೇತೃತ್ವದಲ್ಲೇ ರಚಿಸಿಲಾಗಿದೆ. ಸಮಿತಿಯಲ್ಲಿ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್, ಹನೂರಿನ ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಕೊಳ್ಳೇಗಾಲದ ವೀರಶೈವ ಮುಖಂಡ ತೋಟೇಶ್, ವಕೀಲ ಶಶಿಬಿಂಬ, ಪೊನ್ನಾಚಿ ಮಹಾದೇವಸ್ವಾಮಿ ಮತ್ತಿತ್ತರರು ಇದ್ದಾರೆ. ಉತ್ತರಾಧಿಕಾರಿ ಆಯ್ಕೆ ಬಗ್ಗೆ ಈಗಾಗಲೇ ಹಲವು ಸಭೆಗಳನ್ನು ಕೂಡ ನಡೆಸಿದ್ದಾರೆ.

ವಿಲ್​ನಲ್ಲಿ ಏನಿದೆ:
ತಮಗೆ ವಯಸ್ಸಾಗಿದ್ದು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ನನ್ನ ಇಚ್ಛೆಯಂತೆ ಹನೂರು ತಾಲೂಕಿನ‌ ಬಂಡಳ್ಳಿ ಗ್ರಾಮದ ಸುಂದರಮ್ಮ ಮತ್ತು ಮಹದೇವಸ್ವಾಮಿ ದಂಪತಿಗಳ ಮಗ ಎಂ.ನಾಗೇಂದ್ರ ಎಂಬ ವಟುವನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕು. ಧಾರ್ಮಿಕ ಅಧಿಕಾರ, ಮಠದ ಚರ ಮತ್ತು ಸ್ಥಿರ ಆಸ್ತಿಗಳ ಅಧಿಕಾರ, ಮಲೆಮಹದೇಶ್ವರ ಶ್ರೀಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯತ್ವ ಎಲ್ಲವೂ ಸೇರತಕ್ಕದ್ದು.‌ ನಾನು ಉತ್ತರಾಧಿಕಾರಿಯನ್ನು ನೇಮಿಸುವ ಮುನ್ನವೇ ಶಿವೈಕ್ಯವಾದರೇ ಸುತ್ತೂರು ಶ್ರೀ ಉತ್ತರಾಧಿಕಾರಿಗೆ ಪಟ್ಟಾಧಿಕಾರವನ್ನು ವಹಿಸಿಕೊಡಬೇಕು ಎಂದು ಮರಣ ಶಾಸನದಲ್ಲಿ ನಮೂದಿಸಿದ್ದಾರೆ.

ಮಠದ ಸ್ವತ್ತುಗಳ ಕುರಿತು ಪಟ್ಟಿಯಲ್ಲಿ ಹನೂರು ತಾಲೂಕು ಮತ್ತು ಕೊಳ್ಳೇಗಾಲ ತಾಲೂಕಿನ ವಿವಿಧೆಡೆ ಇರುವ ಜಮೀನುಗಳು, ಬೆಂಗಳೂರಿನಲ್ಲಿರುವ ನಿವೇಶನದ ವಿವರಗಳನ್ನು ಸ್ವಾಮೀಜಿ ಪಟ್ಟಿ ಮಾಡಿದ್ದಾರೆ.

ವಿತ್ ಡ್ರಾ ಆಗತ್ತೆ:
ಈ ಕುರಿತು ಸಾಲೂರು ಮಠದ ನಿಕಟವರ್ತಿ ಮತ್ತು ಭಕ್ತಾದಿಯಾದ ಪೊನ್ನಾಚಿ ಮಹಾದೇವಸ್ವಾಮಿ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾತನಾಡಿ, ವಿಲ್ ಮಾಡಿರುವ ಕುರಿತು ಗಮನಕ್ಕೆ ಬಂದಿದ್ದು, ಶ್ರೀಗಳು ಅದನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ವಿಲ್‌ ಮಾಡಿದ್ದಾಗಿ ತಿಳಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.‌ ಇನ್ನು, ಸಾಲೂರು ಮಠದ ಹಿರಿಯ ಶ್ರೀ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ.

ಮುಗಿಯದ ವಿವಾದ:
ಸುಳ್ವಾಡಿ ವಿಷ ದುರಂತ, ಅಕ್ರಮವಾಗಿ ಕಾಣಿಕೆ ಹಸುಗಳ ಸಾಗಾಟದ ಬಳಿಕ ಭಕ್ತರ ಗಮನಕ್ಕೆ ತಾರದೇ ವಿಲ್ ಮಾಡಿಟ್ಟು ಆಯ್ಕೆ ಸಮಿತಿ ರಚಿಸಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದೆ ಈ ಐತಿಹಾಸಿಕ ಮಠ.

ABOUT THE AUTHOR

...view details