ಚಾಮರಾಜನಗರ: ಕೊರೊನಾ ತಡೆಗಾಗಿ ಸರ್ಕಾರದ ನಿರ್ದೇಶನದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ ಆರ್ ರವಿ ವಿಧಿಸಿರುವ ವಾರಾಂತ್ಯದ ಲಾಕ್ಡೌನ್ ಪ್ರವಾಸಿತಾಣವಾದ ಕೆ.ಗುಡಿಗೆ ಬರುವ ಪ್ರವಾಸಿಗರಿಗೆ ಮಾತ್ರ ಅನ್ವಯವಾಗಿಲ್ಲ.
ಡಿಸಿ ಆದೇಶ ಉಲ್ಲಂಘನೆ ಮಾಡಿ ಸಫಾರಿ ವಾರಾಂತ್ಯದಲ್ಲಿ ಬಂಡೀಪುರ ಸೇರಿದಂತೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೆ.ಗುಡಿಯಲ್ಲಿ ವನ್ಯಜೀವಿ ಸಫಾರಿಗೆ ನಿರ್ಬಂಧವಿದ್ದರೂ ಪ್ರವಾಸಿಗರು ಸಫಾರಿ ನಡೆಸಿರುವುದು ಈಟಿವಿ ಭಾರತ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರವಾಸಿತಾಣಗಳಿಗೆ ಶನಿವಾರ, ಭಾನುವಾರ ಪ್ರವಾಸಿಗರಿಗೆ ನಿರ್ಬಂಧವಿದ್ದರೂ ಬೆಂಗಳೂರಿನಿಂದ ಬಂದ ಕೆಲವರು, ಬಿಳಿಗಿರಿರಂಗನ ಬೆಟ್ಟ ಮತ್ತು ಕೆ.ಗುಡಿಯಲ್ಲಿ ಸುತ್ತಾಡಿ ಕೆ.ಗುಡಿಯಲ್ಲಿ ಸಫಾರಿಯನ್ನೂ ನಡೆಸಿದ್ದಾರೆ. ಈ ಕುರಿತು ಬೆಂಗಳೂರಿನ ಸಫಾರಿಗರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ವೀಕೆಂಡ್ ಕರ್ಫ್ಯೂ ಇರುವುದು ಗೊತ್ತಿಲ್ಲ.
ತಮ್ಮನ್ನು ಚೆಕ್ಪೋಸ್ಟ್ನಲ್ಲಿ ಯಾರೂ ನಿರ್ಬಂಧಿಸಲೂ ಇಲ್ಲ, ಸಫಾರಿ ನಡೆಸಿದೆವು ಎಂದು ಖಾರವಾಗಿಯೇ ಉತ್ತರಿಸಿದರು. ಒಂದೆಡೆ ಜಿಲ್ಲಾಡಳಿತ ಗಡಿಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಏರ್ಪಟ್ಟು ಕೊರೊನಾ ಹರಡದಂತೆ ವಾರಾಂತ್ಯ ಕರ್ಪ್ಯೂ ಜಾರಿ ಮಾಡಿದ್ದರೇ, ಅರಣ್ಯ ಇಲಾಖೆ ಮಾತ್ರ ಜಿಲ್ಲಾಡಳಿತದ ನಿಯಮವನ್ನು ಗಾಳಿಗೆ ತೂರಿದೆ.
ತನ್ನ ಗಮನಕ್ಕೆ ಬಂದಿಲ್ಲ: ಈ ಕುರಿತು ಈಟಿವಿ ಭಾರತಕ್ಕೆ ಕೆ.ಗುಡಿ ವಲಯ ಅರಣ್ಯಾಧಿಕಾರಿ ಶಾಂತಪ್ಪ ಪೂಜಾರ್ ಪ್ರತಿಕ್ರಿಯಿಸಿ, ವಾರದ ದಿನಗಳಲ್ಲಿ ಸಫಾರಿ ನಡೆಸಲು ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ವಾರಾಂತ್ಯ ಸಫಾರಿಗೆ ನಿರ್ಬಂಧವಿದ್ದು, ಇಂದು ಕೆಲವರು ಸಫಾರಿ ನಡೆಸಿರುವುದು ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಸಿಸಿಎಫ್ ಮನೋಜ್ ಕುಮಾರ್ ಅವರನ್ನು ಸಂಪರ್ಕಿಸಿದರಾದರೂ ಪ್ರತಿಕ್ರಿಯೆಗೆ ಸಿಗಲಿಲ್ಲ.
ಕಳೆದ ಕೆಲವು ದಿನಗಳ ಹಿಂದೆ ಬೂದಿಪಡಗ ಗೆಸ್ಟ್ ಹೌಸಿನಲ್ಲಿ ಡಿಆರ್ಎಎಫ್ಒ ಒಬ್ಬರು ಕುಟುಂಬದೊಂದಿಗೆ ಮೋಜು ಮಾಡಿ ಕ್ರಿಕೆಟ್ ಆಡಿದ್ದ ಆರೋಪ ಕೇಳಿ ಬಂದಿತ್ತು. ಈಗ ನಿರ್ಬಂಧದ ನಡುವೆಯೂ ಸಫಾರಿ ನಡೆಸಿರುವುದು ಅರಣ್ಯ ಇಲಾಖೆಯ ಕಾರ್ಯ ದಕ್ಷತೆಗೆ ಕನ್ನಡಿ ಹಿಡಿದಿದೆ.