ಚಾಮರಾಜನಗರ: ಸೋಲಿಗ ಸಮುದಾಯದ ವಿಶಿಷ್ಟ ಹಾಗೂ ಸಾಂಪ್ರದಾಯಿಕ ರೊಟ್ಟಿ ಹಬ್ಬವನ್ನು ಇಂದು ಹನೂರು ತಾಲೂಕಿನ ಕೌಳಿಹಳ್ಳ ಹಾಡಿ ಜನರು ಸಂಭ್ರಮದಿಂದ ಆಚರಿಸಿದರು. ತಿಂಗಳುಗಟ್ಟಲೇ ಫಸಲನ್ನು ಕಾದು ಕೈಗೆ ಬಂದ ನಂತರ ಸಾಮೂಹಿಕವಾಗಿ ಎಲ್ಲರೂ ಸೇರಿ ಮೊದಲ ಫಸಲಿನ ರಾಗಿಯಲ್ಲಿ ರೊಟ್ಟಿ ತಯಾರಿಸಿ ದೇವರಿಗೆ ನೈವೇದ್ಯ ಇಟ್ಟು ಸಹಪಂಕ್ಷಿ ಭೋಜನ ಮಾಡುವುದೇ ರೊಟ್ಟಿ ಹಬ್ಬದ ವಿಶೇಷ. ಸೋಲಿಗರ ಪ್ರಮುಖ ಹಬ್ಬಗಳಲ್ಲಿ ಇದು ಕೂಡ ಒಂದಾಗಿದೆ.
ಕೌಳಿಹಳ್ಳದಲ್ಲಿನ ಮಹದೇಶ್ವರ ಇವರ ಆರಾಧ್ಯ ದೈವ. ಮೊದಲ ರಾಗಿ ಫಸಲನ್ನು ದೇವರಿಗೆ ಅರ್ಪಿಸಲಿದ್ದು ದೇವರಿಗೆ ಹರಕೆ ಸಲ್ಲಿಸುವ ತನಕ ಮೊದಲ ಫಸಲಿನ ರಾಗಿಯನ್ನು ಇವರು ಉಪಯೋಗಿಸುವುದಿಲ್ಲ. ಅಲ್ಲದೇ ಬೇರೆಯವರು ಅದನ್ನು ತೆಗೆದುಕೊಂಡು ಹೋಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಲಿದ್ದಾರೆ. ಪ್ರತಿ ಕುಟುಂಬವು ತಲಾ ಒಂದು ಕೆ.ಜಿ ಯಷ್ಟು ರಾಗಿಯನ್ನು ಸಂಗ್ರಹಿಸಿದ ಬಳಿಕ ಸ್ವಚ್ಛಗೊಳಿಸಿ ಹಿಟ್ಟು ತಯಾರಿಸುತ್ತಾರೆ. ಹಿಟ್ಟನ್ನು ಚೆನ್ನಾಗಿ ಕಲಸಿ ಮುತ್ತುಗದ ಎಲೆಯಲ್ಲಿ ರೊಟ್ಟಿಯನ್ನು ತಟ್ಟುತ್ತಾರೆ. ಬಳಿಕ ಅದನ್ನು, ಮೊದಲೇ ಹರಡಿದ್ದ ಕೆಂಡದ ಮೇಲಿಟ್ಟು ಬೇಯಿಸಿ ನಂತರ ಒಂದೆಡೆ ಗುಡ್ಡೆ ಹಾಕುತ್ತಾರೆ. ರೊಟ್ಟಿಯನ್ನು ತಟ್ಟಲು ಮತ್ತು ಕೆಂಡದಲ್ಲಿ ಬೇಯಿಸಲು ಹತ್ತಾರು ಮಂದಿ ಗಿರಿಜನರು ತೊಡಗಿಸಿಕೊಳ್ಳುತ್ತಾರೆ.
ಸುಮಾರು ಐದಾರು ಗಂಟೆಗಳ ಪರಿಶ್ರಮದಿಂದ ರೊಟ್ಟಿ ತಯಾರಿಸುತ್ತಾರೆ. ಬಳಿಕ ರೊಟ್ಟಿಯನ್ನು ದೇವರಿಗೆ ಅರ್ಪಿಸಿ, ಪೂಜೆ ಸಲ್ಲಿಸಿ ಮುಂಬರುವ ದಿನಗಳಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಯಾಗಲಿ ಹಾಗೂ ಹಾಡಿಯಲ್ಲಿ ರೋಗರುಜಿನಗಳು ದೂರಾಗಲಿ ಎಂದು ಪ್ರಾರ್ಥಿಸಿ, ಪ್ರಸಾದ ಪಡೆದ ಬಳಿಕ ಒಟ್ಟಿಗೆ ಕುಳಿತು ಆಹಾರ ಸೇವಿಸುತ್ತಾರೆ. ರೊಟ್ಟಿಯ ಜತೆ ಸೇವಿಸಲು ಕುಂಬಳಕಾಯಿ ಪಲ್ಯ, ಅನ್ನ ಹಾಗೂ ಅವರೆಕಾಳು ಸಾಂಬಾರ್ ತಯಾರಿಸಲಾಗುತ್ತದೆ. ಸೋಲಿಗರ ರೊಟ್ಟಿ ಹಬ್ಬದಲ್ಲಿ ಇತರ ಸಮುದಾಯದವರು ಪಾಲ್ಗೊಳ್ಳುವುದು ಮತ್ತೊಂದು ವಿಶೇಷ. ಒಂದೊಂದು ಹಾಡಿ ಜನರು ಒಂದೊಂದು ದಿನ ಮಾಡಲಿದ್ದು ಬಿಳಿಗಿರಿರಂಗನ ಬೆಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಸೇರಿ ರೊಟ್ಟಿ ಹಬ್ಬ ಆಚರಿಸುತ್ತಾರೆ.