ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೇಗೂರು ಸರ್ಕಾರಿ ಪಿಯು ಕಾಲೇಜು ಹಾಗೂ ಪ್ರೌಢಶಾಲೆಗೆ ಸಚಿವ ವಿ.ಸೋಮಣ್ಣ ಅಭಿಮಾನಿ ಬಳಗವು 12 ಲಕ್ಷ ರೂ.ವೆಚ್ಚದಲ್ಲಿ ರೋಬೋಟಿಕ್ ಮತ್ತು ಸೈನ್ಸ್ ಲ್ಯಾಬ್ ಕೊಡುಗೆ ನೀಡಿದ್ದು, ಇಂದು ಸೋಮಣ್ಣ ಲೋಕಾರ್ಪಣೆಗೊಳಿಸುವರು. ರೋಬೋಟಿಕ್ ಲ್ಯಾಬ್ನಲ್ಲಿ ಶಿಕ್ಷಕರ ಬದಲಾಗಿ ಜಪಾನ್ನಿಂದ ಆಮದು ಮಾಡಿಕೊಂಡಿರುವ ಬಿದ್ಯುತ್ ಎಂಬ ಈ ರೋಬೋ ಯಾವುದೇ ಮಾಹಿತಿ, ಯಾವುದೇ ಭಾಷೆ, ಎಷ್ಟೇ ಮಾಹಿತಿಯನ್ನಾದರೂ ಕೊಡಲಿದೆ.
ಲ್ಯಾಬ್ ವಿಶೇಷತೆಗಳೇನು?: ರೋಬೋಟಿಕ್ ಲ್ಯಾಬ್ನಲ್ಲಿ ಶಿಕ್ಷಕ ಮಾಡುವ ಕಾರ್ಯವನ್ನು ರೋಬೋಟ್ ಮಾಡಲಿದೆ. ರೋಬೋ ಜೊತೆಗೆ 2,000 ಮಾಡೆಲ್ ತಯಾರಿಸುವ ಕಿಟ್ ಇದ್ದು, ವಿದ್ಯಾರ್ಥಿಗಳು ಯಾವ ಮಾಡೆಲ್ ಮಾಡಬೇಕೆಂದರೂ ರೋಬೋ ಮಾರ್ಗದರ್ಶನ ಕೊಡಲಿದೆ. ಬೀದಿ ದೀಪ ತಯಾರಿಕೆ ಹೇಗೆ? ವಾಯು ಶಕ್ತಿ, ಸೌರಫಲಕ, ಮೊಬೈಲ್ ಕಾರ್ಯ ನಿರ್ವಹಣೆ, ಸೂಕ್ಷ್ಮ ದರ್ಶಕ ತಯಾರಿಸುವುದು ಹೇಗೆ? ಎಂಬುದನ್ನೆಲ್ಲಾ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲಿದ್ದಾರೆ.