ಗುಡಿಬಂಡೆ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ರೈತರೇ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.
ಅಹವಾಲಿಗೆ ಸ್ಪಂದಿಸದ ಜನಪ್ರತಿನಿಧಿಗಳು: ರೈತರಿಂದಲೇ ರಸ್ತೆ ಕಾಮಗಾರಿಗೆ ಚಾಲನೆ
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಹವಾಲಿಗೆ ಸ್ಪಂದಿಸದ ಕಾರಣ ಚಾಮರಾಜನಗರ ಜಿಲ್ಲೆಯ ಗುಡಿಬಂಡೆ ತಾಲೂಕಿನ ರೈತರು ತಾವೇ ಸ್ವತ: ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಸುಕಾಲಿಗರ ಬೀಡು ಎಂದು ಕರೆಯಲ್ಪಡುವ ತಾಲೂಕಿನ ಕಾಡಂಚಿನ ದುರ್ಗಮ ಪ್ರದೇಶದಲ್ಲಿರುವ ಕೃಷಿ ಜಮೀನುಗಳಿಗೆ ಹೋಗಿ ಬರಲು ಸಮರ್ಪಕ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ದಶಕಗಳಿಂದ ರೈತರು ಮನವಿ ಮಾಡುತ್ತಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರೈತರೇ ಹಣ ಕ್ರೋಢೀಕರಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಕಾಮಗಾರಿ ಶುರು ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ರಮೇಶ್, ಪಟ್ಟಣದ ಹೊರವಲಯದ ಅಕ್ಕಮ್ಮದೇವಿ ದೇವಾಲಯದ ಮುಂಭಾಗದಿಂದ ಹೊರಟು ಕಾಡಂಚಿನ ಕೃಷಿ ಭೂಮಿಯನ್ನು ತಲುಪಲು ಸಮರ್ಪಕ ರಸ್ತೆ ಇಲ್ಲ. ಈ ಪ್ರದೇಶದಲ್ಲಿ ಅನೇಕ ರೈತರ ನೂರಾರು ಎಕರೆ ಕೃಷಿ ಯೋಗ್ಯ ಭೂಮಿಯಿದೆ. ದಾರಿಮಧ್ಯೆ ಪ್ರಮುಖ ಕಾಲುವೆ ಕೂಡ ಇದೆ. ಕೃಷಿಯನ್ನೇ ಪ್ರಧಾನ ಕಸುಬನ್ನಾಗಿಸಿರುವ ರೈತರು ತಮ್ಮ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆಯುವ ಬೆಳೆಗೆ ಪ್ರಾಮುಖ್ಯತೆ ನೀಡುತ್ತಾರೆ. ಹೆಚ್ಚು ಮಳೆ ಬಂದರೆ ಕಾಲುವೆ ತುಂಬಿ ಹರಿಯುವುದರಿಂದ ಜಮೀನಿನತ್ತ ಹೋಗಲು ಸಾಧ್ಯವಾಗುವುದಿಲ್ಲ. ಕಾಡು ಪ್ರಾಣಿಗಳು ಬೆಳೆಯ ಮೇಲೆ ದಾಳಿ ಮಾಡುತ್ತವೆ. ಸರಿಯಾದ ರಸ್ತೆ ಇಲ್ಲದಿರುವುದರಿಂದ ಹಲವಾರು ವರ್ಷಗಳಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಆಶ್ವಾಸನೆ ನೀಡುವ ಜನಪ್ರತಿನಿಧಿಗಳು ನಮ್ಮ ದಶಕಗಳ ಬೇಡಿಕೆ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.