ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಬೆಂಕಿಗಾಹುತಿಯಾಗಿ 6 ಮಂದಿ ಭಕ್ತರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ತಾಳಬೆಟ್ಟ ಸಮೀಪದ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.
ಮಾದಪ್ಪನ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಬೆಂಕಿಗಾಹುತಿ: 6 ಮಂದಿ ಭಕ್ತರಿಗೆ ಗಂಭೀರ ಗಾಯ! - ಚಾಮರಾಜನಗರ ಇತ್ತೀಚಿನ ಸುದ್ದಿ
ತಾಳಬೆಟ್ಟ ಸಮೀಪದ ಮಾರಮ್ಮ ದೇವಸ್ಥಾನದ ಬಳಿ ಕಾರು ಬೆಂಕಿಗಾಹುತಿಯಾಗಿ 6 ಮಂದಿ ಭಕ್ತರು ಗಾಯಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ವಾಜಮಂಗಲ ಗ್ರಾಮದಿಂದ ಕಾರಿನಲ್ಲಿ ಬೆಟ್ಟಕ್ಕೆ ಬರುತ್ತಿದ್ದ ಬಸವರಾಜು (23) , ಗಣೇಶ್ ( 23) ನವೀನ್ (23) ಪ್ರತಾಪ್ (25) ಡಿ.ಶ್ರೀನಿವಾಸ್ (25) ಅಜಯ್ (22) ಎಂಬುವವರಿಗೆ ಪೆಟ್ಟಾಗಿದೆ. ಇನ್ನು ಬಸವರಾಜು ಮತ್ತು ಗಣೇಶ್ಗೆ ಗಂಭೀರ ಗಾಯವಾಗಿದೆ.
ತಾಳಬೆಟ್ಟದ ಬಳಿ ಕಾರಿನ ಇಂಜಿನ್ನಲ್ಲಿ ಸಮಸ್ಯೆ ಉಂಟಾಗಿದ್ದು, ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿ ಶಾಮಕ ಸಿಬ್ಬಂದಿ ಕಾರಿನ ಬೆಂಕಿಯನ್ನು ನಂದಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.