ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮೂಲಕ ತಮಿಳುನಾಡಿಗೆ ತೆರಳುತ್ತಿದ್ದ 6 ಚಕ್ರಗಳ ಲಾರಿಗಳ ಸಂಚಾರವನ್ನು ನಿರ್ಬಂಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ದಿಂಬಂ ಘಟ್ಟ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ನೀಷೇಧ ಇರುವುದರಿಂದ ತಮಿಳುನಾಡಿಗೆ ಸರಕು ಸಾಗಿಸುವ ಲಾರಿಗಳೆಲ್ಲಾ ಮಲೆಮಹದೇಶ್ವರ ಬೆಟ್ಟದ ಮೂಲಕ ನೆರೆ ರಾಜ್ಯಕ್ಕೆ ತಲುಪುತ್ತಿದ್ದವು. ಆದರೆ, ಬೆಟ್ಟದ ರಸ್ತೆ ಕಿರಿದು ಹಾಗೂ ಕಡಿದಾದ ಹಿನ್ನೆಲೆಯಲ್ಲಿ ಆಗಾಗ್ಗೆ ಲಾರಿಗಳು ಪಲ್ಟಿಯಾಗಿ ಗಂಟೆಗಟ್ಟಲೇ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಡಿಸಿ ಚಾರುಲತಾ ಸೋಮಲ್ ಅವರು ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ 6ಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಭಾರೀ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಿದ್ದು, 6 ಚಕ್ರಗಳನ್ನು ಹೊಂದಿರುವ ವಾಹನಗಳ (ಲಾರಿ) ಸಂಚಾರವನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ನಿರ್ಬಂಧಿಸಲಾಗಿದೆ.
ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳು, ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್, ಸರ್ಕಾರಿ, ಖಾಸಗಿ ಬಸ್‍ಗಳು, ಸರ್ಕಾರಿ ವಾಹನಗಳು 24 ತಾಸು ಕೂಡ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ.
ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾತ್ರಿ ಸಂಚಾರ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಎಲ್ಲಾ ಮಾದರಿಯ ವಾಹನಗಳು ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಸಂಚರಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಮತ್ತು ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್ ವರೆಗಿನ ರಸ್ತೆಯು ಕಡಿದಾದ ತಿರುವಿನಿಂದ ಕೂಡಿದ್ದು, ಆಗಾಗ್ಗೆ ಪಲ್ಟಿಯಾಗಿ ಎಡವಟ್ಟು ಸೃಷ್ಟಿಯಾಗುತ್ತಿತ್ತು. ತಿಂಗಳಲ್ಲೇ ಎರಡು ಮೂರು ಬಾರಿ ನೀರಿನ ಜಾಕ್ವೆಲ್ಗೆ ಡಿಕ್ಕಿ ಹೊಡೆದು ಅವಾಂತರ ಸೃಷ್ಟಿಯಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ಮೇರೆಗೆ ಈ ಆದೇಶ ಹೊರಬಿದ್ದಿದ್ದು, ಮಾದಪ್ಪನ ಭಕ್ತರಿಗೆ ರಿಲೀಫ್ ಸಿಕ್ಕಿದೆ. ರಸ್ತೆ ಹಾಳಾಗುವುದು ತಪ್ಪಿದಂತಾಗಿದೆ.
ಇದನ್ನೂ ಓದಿ :ದಿಂಬಂ ಘಟ್ಟ ಪ್ರದೇಶದಲ್ಲಿ 12 ಚಕ್ರದ ವಾಹನಗಳ ಸಂಚಾರಕ್ಕೆ ಬ್ರೇಕ್.. ಹೀಗಿದೆ ಹೊಸ ರೂಲ್ಸ್!!