ಕರ್ನಾಟಕ

karnataka

ETV Bharat / state

ಐಎಫ್ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಬಳಸುತ್ತಿದ್ದ ಜೀಪ್ ರಿಪೇರಿ : ಅರಣ್ಯಾಧಿಕಾರಿ ವಾಹನವೀಗ ಸ್ಮಾರಕ - ಜೀಪ್ ರಿಪೇರಿ

ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆತನ ಮೋಸಕ್ಕೆ ಬಲಿಯಾದ ಐಎಫ್ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಬಳಸಿದ್ದ ಜೀಪು ಪಾಲಾರ್ ಆರ್​ಎಫ್ಒ ಕಚೇರಿ ಸಮೀಪ ಹತ್ತಾರು ವರ್ಷಗಳಿಂದ ಅನಾಥವಾಗಿ ನಿಂತಿತ್ತು. ಇದೀಗ ಈ ಜೀಪ್​ಗೆ ಎಂಎಂಹಿಲ್ಸ್ ಡಿಸಿಎಫ್​ ಏಡುಕೊಂಡಲು ಮರುಜೀವ ಕೊಟ್ಟಿದ್ದಾರೆ.

ಜೀಪ್
ಜೀಪ್

By

Published : May 4, 2022, 12:44 PM IST

Updated : May 4, 2022, 2:37 PM IST

ಚಾಮರಾಜನಗರ: ಸರ್ಕಾರಿ ವಾಹನಗಳು ಕೆಟ್ಟು ನಿಂತರೆ ಇಲ್ಲವೇ ಹಳತಾದರೆ ಗುಜರಿಗೆ ಹಾಕುವುದು ಸಾಮಾನ್ಯ. ‌ಆದರೆ, ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆತನ ಮೋಸಕ್ಕೆ ಬಲಿಯಾದ ಐಎಫ್ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಬಳಸಿದ್ದ ಜೀಪು ಇದೀಗ ಕೊಳ್ಳೇಗಾಲದಲ್ಲಿರುವ ಮಲೆಮಹದೇಶ್ವರ ವನ್ಯಜೀವಿಧಾಮ ಕಚೇರಿ ಆವರಣದಲ್ಲಿ ಸ್ಮಾರಕ ರೂಪ ಪಡೆದಿದೆ.

ಪಾಲಾರ್ ಆರ್​ಎಫ್ಒ ಕಚೇರಿ ಸಮೀಪ ಹತ್ತಾರು ವರ್ಷಗಳಿಂದ ಅನಾಥವಾಗಿ ನಿಂತಿದ್ದ ಜೀಪ್​ಗೆ ಎಂಎಂಹಿಲ್ಸ್ ಡಿಸಿಎಫ್​ ಏಡುಕೊಂಡಲು ಮರುಜೀವ ಕೊಟ್ಟಿದ್ದಾರೆ. ಜೀಪನ್ನು ರಿಪೇರಿ ಮಾಡಿಸಿ ಮತ್ತೆ ಸುಸ್ಥಿತಿಗೆ ತಂದು ಅದನ್ನು ಸಂರಕ್ಷಿಸಿಡಲಾಗಿದೆ. ಅಷ್ಟೇ ಅಲ್ಲ, ಶ್ರೀನಿವಾಸ್ ಅವರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಿಗಬೇಕು ಎಂಬ ದೃಷ್ಟಿಯಿಂದ ಅತಿಥಿ ಗೃಹದ ಮೊದಲ ಮಹಡಿಯಲ್ಲಿ ಅವರ ಹೆಸರಿನಲ್ಲಿ ಗ್ರಂಥಾಲಯ ತೆರೆದಿದ್ದಾರೆ.

ಪಿ.ಶ್ರೀನಿವಾಸ್ ಸ್ಮಾರಕ

ಶ್ರೀನಿವಾಸ್ ಅವರು ವಿವಿಧ ಕಡೆ ಸೇವೆ ಸಲ್ಲಿಸಿದ ಫೋಟೋಗಳು, ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ಬಡವರಿಗಾಗಿ ನಿರ್ಮಿಸಿಕೊಟ್ಟ ಮನೆಗಳು, ದೇವಾಲಯ, ಎಸ್‌ಟಿಎಫ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಹೀಗೆ ಎಲ್ಲಾ ರೀತಿಯ ಭಾವಚಿತ್ರಗಳು ಹಾಗೂ ಅವರಿಗೆ ಸಂಬಂಧಿಸಿದ ಸಾಹಿತ್ಯ, ಬರಹಗಳು, ದಾಖಲೆಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.

ವೀರಪ್ಪನ್ ಮರೆಯಾದರೂ ಶ್ರೀನಿವಾಸನ್ ಅಮರ: ಪಿ.ಶ್ರೀನಿವಾಸನ್ ಮಹಾತ್ಮ ಗಾಂಧೀಜಿ, ವಿನೋಬಾ ಭಾವೆಯಿಂದ ಪ್ರಭಾವಿತರಾಗಿ ಕಾಡುಗಳ್ಳನನ್ನು ಅಹಿಂಸೆಯಿಂದ ಬದಲಾಯಿಸುತ್ತೇನೆ ಎಂದು ವೀರಪ್ಪನ್ ಕಾರ್ಯಾಚರಣೆಗೆ ಸ್ವಯಂ ಪ್ರೇರಣೆಯಿಂದ ಬಂದಿದ್ದ ಐಎಫ್ಎಸ್ ಅಧಿಕಾರಿ. ದಂತಚೋರ ವೀರಪ್ಪನ್ ಕೇವಲ ಒಂದು ಬಾರಿ ಮಾತ್ರ ಪೊಲೀಸರಿಗೆ ಸೆರೆಸಿಕ್ಕಿದ್ದ. 1980 ರಲ್ಲಿ ಬೆಂಗಳೂರು ಸಾರ್ಕ್ ಸಮ್ಮೇಳನ ನಡೆಯುವ ವೇಳೆ ವೀರಪ್ಪನ್​ನನ್ನು ಬಂಧಿಸಿ ಅರಣ್ಯ ಇಲಾಖೆಗೆ ಬೆಂಗಳೂರಿನ ಅಧಿಕಾರಿಗಳು ಡಿಎಫ್ಒ ಶ್ರೀನಿವಾಸನ್​ಗೆ ಒಪ್ಪಿಸಿದ್ದರು. ಚಾಮರಾಜನಗರದ ಬೂದಿಪಡಗ ಗೆಸ್ಟ್ ಹೌಸ್​ನಲ್ಲಿ 3 ದಿನ ವಿಚಾರಣೆಗಿಡಲಾಗಿತ್ತು. ಶ್ರೀನಿವಾಸನ್ ರೌಂಡ್ಸ್​ಗೆ ಹೋದ ವೇಳೆ ಗೆಸ್ಟ್ ಹೌಸ್ ನಿಂದ ಪರಾರಿಯಾದ ವೀರಪ್ಪನ್, ಇನ್ನೆಂದು ಪೊಲೀಸರಿಗಾಗಲಿ- ಅರಣ್ಯಾಧಿಕಾರಿಗಳಿಗಾಗಲಿ ಜೀವಂತವಾಗಿ ಸಿಗಲಿಲ್ಲ.

ಐಎಫ್ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಬಳಸಿದ್ದ ಜೀಪು

ಶರಣಾಗುತ್ತೇನೆಂದು ಸಂಚು: ಶರಣಾಗುತ್ತೇನೆಂದು ಸಂಚು ರೂಪಿಸಿದ ವೀರಪ್ಪನ್​, ಡಿಸಿಎಫ್ ಶ್ರೀನಿವಾಸನ್ ಅವರನ್ನು 1991 ನವೆಂಬರ್ 10 ರಂದು ಗೋಪಿನಾಥಂನಿಂದ ಅಣತಿ ದೂರದ ನಲ್ಲೂರು ಬಳಿ ತಲೆ ಕತ್ತರಿಸಿ ಬರ್ಬರವಾಗಿ ಕೊಂದು ಹಾಕಿದ್ದ. ಈ ಮೂಲಕ ಕಾಡುಗಳ್ಳನನ್ನು ಬದಲಿಸುತ್ತೇನೆಂಬ ವಿಶ್ವಾಸವೇ ಶ್ರೀನಿವಾಸನ್ ಅವರಿಗೆ ಮುಳುವಾಗಿತ್ತು.

ಅಪ್ಪಟ ಗಾಂಧಿವಾದಿಯಾಗಿದ್ದ ಪಿ.ಶ್ರೀನಿವಾಸ್, ವೀರಪ್ಪನ್ ಊರಾದ ಗೋಪಿನಾಥಂನಲ್ಲಿ ಜನರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಮಾರಿಯಮ್ಮ ದೇಗುಲ ನಿರ್ಮಿಸಿ ಕೊಟ್ಟಿದ್ದು, ಇಂದಿಗೂ ಅವರ ಫೋಟೋ ಗ್ರಾಮದ ಪ್ರತಿಯೊಬ್ಬರ ಮನೆಗಳಲ್ಲೂ ಇದೆ. ಮಾರಿಯಮ್ಮ ದೇವಾಲಯದಲ್ಲಿ ಶ್ರೀನಿವಾಸ್ ಅವರಿಗೇ ಪ್ರಥಮ ಪೂಜೆ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಯೊಬ್ಬರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದರೆ ಜನ ಹಾಗೂ ಇಲಾಖೆ ಎಂದಿಗೂ ಮರೆಯುವುದಿಲ್ಲ ಎಂಬುದಕ್ಕೆ ಶ್ರೀನಿವಾಸ್ ಉತ್ತಮ ಉದಾಹರಣೆ.

ಇದನ್ನೂ ಓದಿ:ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ?: ಪಿಎಸ್​​ಐ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ರಚನಾ ಕುಟುಂಬಸ್ಥರ ಅಳಲು!

Last Updated : May 4, 2022, 2:37 PM IST

ABOUT THE AUTHOR

...view details