ಚಾಮರಾಜನಗರ:ಕಾಡಿನ ಕಿರು ಅರಣ್ಯ ಉತ್ಪನ್ನಗಳನ್ನೇ ನಂಬಿ ಜೀವನ ಸಾಗಿಸುವ ಸೋಲಿಗರು, ಬೇಟೆ ಕುರುಬರು ಸೇರಿದಂತೆ ಸ್ಥಳೀಯ ಬುಡಕಟ್ಟು ಜನರಿಗೆ ಇದೀಗ ಕಾಡನ್ನು ಬೆೆಂಕಿ ಅನಾಹುತಗಳಿಂದ ರಕ್ಷಿಸುವ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ನೂರಾರು ಬುಡಕಟ್ಟು ಜನರಿಗೆ ಬಂಡೀಪುರ ಅರಣ್ಯ ಇಲಾಖೆ 5ರಿಂದ 6 ತಿಂಗಳವರೆಗೆ ನೌಕರಿ ಒದಗಿಸಿದೆ.
ಬರಗಾಲದಲ್ಲಿ ಕೂಲಿಗೆ ಕಷ್ಟಪಡುತ್ತಿದ್ದ ಈ ಜನರು ಇದೀಗ ಅರಣ್ಯದಲ್ಲಿ ಕಾಡ್ಗಿಚ್ಚು ವೀಕ್ಷಕರಾಗಿ ಕೆಲಸಕ್ಕೆ ನೇಮಕವಾಗಿದ್ದಾರೆ. ಬೆಂಕಿ ರೇಖೆ ನಿರ್ಮಾಣ ಹಾಗೂ ಕಾಡ್ಗಿಚ್ಚು ಕಾವಲುಗಾರರಾಗಿ ಇವರು ಕೆಲಸ ಮಾಡಲಿದ್ದಾರೆ. ಹುಲಿ ಸಂರಕ್ಷಿತ ವ್ಯಾಪ್ತಿಯ 500ಕ್ಕೂ ಹೆಚ್ಚು ಬುಡಕಟ್ಟು ಮಂದಿಗೆ ದಿನಗೂಲಿ ಕೆಲಸ ನೀಡಿದ್ದು, ತಿಂಗಳಿಗೆ ಸುಮಾರು 16 ಸಾವಿರ ರೂಪಾಯಿ ವೇತನ ಸಿಗಲಿದೆ.