ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೇಗುಲಕ್ಕೆ ಭಕ್ತರಿಗೆ ಪ್ರವೇಶ ಮುಕ್ತ ಮಾಡಲು ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆ ಕೈಗೊಂಡಿದೆ.
ಜೂ.8 ರಿಂದ ದೇಗುಲಕ್ಕೆ ಭಕ್ತರು ಬರಬಹುದಾಗಿದ್ದು ಕೋವಿಡ್-19 ಭೀತಿಯಲ್ಲಿ 1 ಮೀ. ಅಂತರದ ವೃತ್ತಗಳನ್ನು ಬರೆದಿದ್ದು ಬರುವ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾದಪ್ಪನ ದರ್ಶನ ಪಡೆಯಬೇಕಿದೆ.
ಮಹದೇಶ್ವರ ದೇಗುಲ ತೆರೆಯಲು ಸಕಲ ಸಿದ್ಧತೆ: ನಿರ್ಬಂಧಗಳ ನಡುವೆ ದರ್ಶನ ಕೊಡಲಿದ್ದಾನೆ ಮಾದಪ್ಪ..! - ಚಿನ್ನದ ತೇರು ಮತ್ತಿತರ ರಥದ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದು
ಜೂ.8 ರಿಂದ ದೇಗುಲಕ್ಕೆ ಭಕ್ತರು ಬರಬಹುದಾಗಿದ್ದು ಕೋವಿಡ್-19 ಭೀತಿಯಲ್ಲಿ 1 ಮೀ. ಅಂತರದ ವೃತ್ತಗಳನ್ನು ಬರೆಯಲಾಗಿದೆ. ಇಲ್ಲಿಗೆ ಬರುವ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾದಪ್ಪನ ದರ್ಶನ ಪಡೆಯಬಹುದು.
ಈ ಹಿಂದೆ ಸಾವಿರಾರು ಮಂದಿ ಸಾಲುಗಟ್ಟಿ ನಿಲ್ಲಲು ಪ್ರಾಧಿಕಾರ ಬ್ರೇಕ್ ಹಾಕಿದ್ದು, ಒಮ್ಮೆಗೆ 180 ಮಂದಿ ಮಾತ್ರ ಸಾಲಿನಲ್ಲಿ ನಿಲ್ಲಬೇಕಿದೆ. ರಂಗ ಮಂಟಪದಲ್ಲಿ ಎಬಿಸಿಡಿ ಎಂಬ ನಾಲ್ಕು ವಿಭಾಗ ಮಾಡಿ ಒಂದೊಂದು ಬ್ಲಾಕ್ನಲ್ಲಿ 200 ಮಂದಿ ಕುರ್ಚಿಯಲ್ಲಿ ಕೂರಲು ಅವಕಾಶ ಮಾಡಿಕೊಡಲಾಗುತ್ತಿದ್ದು, ದೇಗುಲ ಪ್ರವೇಶಕ್ಕೂ ಮುನ್ನ ಸಾನಿಟೈಸರ್ ಮಾಡುವ ಜೊತೆಗೆ ಸ್ಕ್ರೀನಿಂಗ್ ಮಾಡಲು ತಯಾರಿ ನಡೆದಿದೆ.
ಚಿನ್ನದ ರಥ ಇರಲ್ಲ: ಕ್ಷೇತ್ರದ ಬಹುಮುಖ್ಯ ಸೇವೆಯಾದ ಚಿನ್ನದ ತೇರು ಮತ್ತಿತರ ರಥದ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು, ಪರ ಮಾಡಲು ಕೂಡ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಬಸ್, ಕಾರು, ಬೈಕ್ನಲ್ಲಿ ಬರುವ ಭಕ್ತರಿಗೆ ಮಾತ್ರ ಅವಕಾಶ ಇರಲಿದ್ದು ಈ ಹಿಂದೆ ಬರುತ್ತಿದ್ದಂತೆ ಗೂಡ್ಸ್ ಆಟೋ, ಟ್ರ್ಯಾಕ್ಟರ್ಗಳಲ್ಲಿ ಬರುವಂತಿಲ್ಲ ಎಂದು ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ದಾಸೋಹ ಭವನದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ತಿಂಡಿ ವ್ಯವಸ್ಥೆ ಕಲ್ಪಿಸಲಿದ್ದು, ಒಟ್ಟಿಗೆ ಕುಳಿತು ತಿನ್ನಲು ಅವಕಾಶ ಇರುವುದಿಲ್ಲ. ಈಗಾಗಲೇ ಪ್ರಾಯೋಗಿಕವಾಗಿ 20 ಸಾವಿರ ಲಡ್ಡು ತಯಾರಿಸಲು ಅಗತ್ಯ ಕ್ರಮ ಕೈಗೊಂಡಿದ್ದು, ಹಲವು ಮುನ್ನೆಚ್ಚರಿಕೆ, ನಿರ್ಬಂಧಗಳ ನಡುವೆ ಜೂ.8 ರಿಂದ ಮಲೆ ಮಾದಪ್ಪ ಭಕ್ತರಿಗೆ ದರ್ಶನ ನೀಡಲು ಅಣಿಯಾಗಿದ್ದಾನೆ.