ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ 3 ಕಾಂಗ್ರೆಸ್, 1 ಜೆಡಿಎಸ್: ಗೆದ್ದ ನಾಲ್ವರು ಅಭ್ಯರ್ಥಿಗಳು ಹೇಳುವುದೇನು ? - ಅಭ್ಯರ್ಥಿಗಳು

ಚಾಮರಾಜನಗರದಲ್ಲಿ ಮೂವರು ಕಾಂಗ್ರೆಸ್ ಹಾಗೂ ಓರ್ವ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮಾಜಿ ಸಚಿವ ದಿ. ಮಹಾದೇವಪ್ರಸಾದ್ ಅವರು ಮಾಡಿದ್ದ ಅಭಿವೃದ್ಧಿಯಿಂದ ಗೆಲುವು ಸಾಧಿಸಿದ್ದೇನೆ ಎಂದು ಅವರ ಮಗ ಗಣೇಶ್ ಪ್ರಸಾದ್ ಹೇಳಿದ್ದಾರೆ.

reaction-of-winning-candidates-in-chamarajanagar
ಚಾಮರಾಜನಗರದಲ್ಲಿ 3 ಕಾಂಗ್ರೆಸ್, 1 ಜೆಡಿಎಸ್: ಗೆದ್ದ ನಾಲ್ವರು ಅಭ್ಯರ್ಥಿಗಳು ಹೇಳುವುದೇನು ?

By

Published : May 13, 2023, 4:41 PM IST

Updated : May 13, 2023, 5:17 PM IST

ಚಾಮರಾಜನಗರದಲ್ಲಿ ಗೆದ್ದ ಅಭ್ಯರ್ಥಿಗಳು ಹೇಳುವುದೇನು ?

ಚಾಮರಾಜನಗರ:ಮಾಜಿ ಸಚಿವವಿಸೋಮಣ್ಣ ಅವರು ಎರಡು ಕ್ಷೇತ್ರಗಳಲ್ಲಿ ಸೋಲುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ, ಅದರಂತೆ ಸೋತಿದ್ದಾರೆ ಎಂದು ಚಾಮರಾಜನಗರದಲ್ಲಿ ಗೆಲುವು ಸಾಧಿಸಿದ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ಗೆಲುವಿನ ಬಳಿಕ ಮಾತನಾಡಿದ ಅವರು, 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದುಕೊಂಡಿದ್ದೆ. ಅದರಂತೆ ಸೋಮಣ್ಣ ಸೋತಿದ್ದಾರೆ. ಇನ್ನು ಬೆಂಗಳೂರಿಗೆ ಹೋಗಬೇಕಷ್ಟೇ, ನಾನು ಮಾಡಿದ ಅಭಿವೃದ್ಧಿ ನೋಡಿ ಜನರು ಆಶೀರ್ವಾದ ಮಾಡಿದ್ದಾರೆ ಎಂದು ​​ಪುಟ್ಟರಂಗಶೆಟ್ಟಿ ಹೇಳಿದರು.

ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ನಾನು ಸಚಿವ ಆಗಬೇಕಾ ಬೇಡವಾ ಎಂಬುದು ಕೂಡ ಪಕ್ಷದ ನಾಯಕರಿಗೆ ಬಿಟ್ಟ ತೀರ್ಮಾನ. ಇಂದು ಸಂಜೆ ಬೆಂಗಳೂರಿಗೆ ಹೋಗುತ್ತಿದ್ದೇನೆ. ಈ ಗೆಲುವಿನಲ್ಲಿ ನನಗೆ ಹೊಸತನ ಏನಿಲ್ಲ, ಮೊದಲ ಬಾರಿಯಿಂದಲೂ ಗೆದ್ದು ಬರುತ್ತಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸಂತಸ ವ್ಯಕ್ತಪಡಿಸಿದರು.

ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಮಾಡುವೆ ಎಂದ ಮಂಜುನಾಥ್:ಹನೂರಿನ ಜನತೆ ನನ್ನನ್ನು ಮನೆ ಮಗನಂತೆ ಕಂಡು ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುವೆ ಎಂದು ಹನೂರಿನ ವಿಜೇತ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಹೇಳಿದರು. ಚಾಮರಾಜನಗರದ ಮತ ಎಣಿಕೆ ಕೇಂದ್ರದಲ್ಲಿ ಮಾತನಾಡಿದ ಅವರು, ನನ್ನ ಮೇಲೆ ನಂಬಿಕೆ ಇಟ್ಟು, ಹಲವು ಭರವಸೆಗಳೊಂದಿಗೆ ಜನರು ನನಗೆ ಹರಸಿದ್ದಾರೆ. ಆದ್ಯತೆ ಮೇರೆಗೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಆಸ್ಪತ್ರೆ, ರಸ್ತೆಗಳನ್ನು ನಿರ್ಮಾಣ ಮಾಡುತ್ತೇನೆ, ಜನರ ಜೊತೆ ಸದಾ ಇರುತ್ತೇನೆ ಎಂದರು.

ನಾನು ಗೆದ್ದರೆ ತಾಳಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸುವುದಾಗಿ ಹರಕೆ ಕಟ್ಟಿಕೊಂಡಿದ್ದೆ. ಅದರಂತೆ ಜನರ ಆಶೀರ್ವಾದ ಸಿಕ್ಕಿದೆ. ಭಗವಂತನ‌ ಆಶೀರ್ವಾದ ಪಡೆಯಲು ಇಂದು ಬೆಂಬಲಿಗರ ಜೊತೆ ಪಾದಯಾತ್ರೆ ನಡೆಸಿ ಮಲೆಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಮಹಾದೇವಪ್ರಸಾದ್ ಅಭಿವೃದ್ಧಿಗೆ ಗೆಲುವು :ನನ್ನ ತಂದೆ ಮಹಾದೇವಪ್ರಸಾದ್ ಮಾಡಿದ ಸಾಧನೆ, ಅಭಿವೃದ್ಧಿ ಹಾಗೂ ಬಿಜೆಪಿ ಶಾಸಕರ 40% ಭ್ರಷ್ಟಾಚಾರವೇ ನನ್ನ ಗೆಲುವಿಗೆ ಕಾರಣ ಎಂದು ಗುಂಡ್ಲುಪೇಟೆ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಹೇಳಿದರು. ಚಾಮರಾಜನಗರದ ಮತ ಎಣಿಕೆ ಕೇಂದ್ರದಲ್ಲಿ ಮಾತನಾಡಿದ ಅವರು, ನನ್ನ ಗೆಲುವನ್ನು ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ. ಕಳೆದ 5 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ನಮ್ಮ ಮುಖಂಡರು, ಕಾರ್ಯಕರ್ತರು ದುಡಿದಿದ್ದಾರೆ. ಅವರಿಗೆ ಕೃತಜ್ಞನಾಗಿದ್ದೇನೆ ಎಂದರು. ಮಹಾದೇವಪ್ರಸಾದ್ ಅವರು ಮಾಡಿದ್ದ ಅಭಿವೃದ್ಧಿ ನೆನಪಿಗೆ ಜನರು ಮತ ಹಾಕಿದ್ದು, ಜನರ ಅಪೇಕ್ಷೆಯಂತೆ ಗೆದ್ದಿದ್ದೇನೆ. ನನಗೂ ಕರೆ ಬಂದಿದ್ದು, ಇಂದು ಬೆಂಗಳೂರಿಗೆ ತೆರಳುತ್ತೇನೆ ಎಂದರು.

1 ಮತದಿಂದ ಸೋತ‌ ನನಗೆ ಅಂತರ ಮುಖ್ಯವಲ್ಲ:ಎಆರ್​ಕೆ 1 ಮತದ ಅಂತರದಿಂದ ಸೋತ ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ ಎಂದು ಕೊಳ್ಳೇಗಾಲದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಹೇಳಿದರು. ಚಾಮರಾಜನಗರದಲ್ಲಿ ಮಾತನಾಡಿದ ಅವರು, 1 ಮತದ ಅಂತರದಿಂದ ಸೋತಿದ್ದೆ. ಆದರೀಗ 50 ಸಾವಿರಕ್ಕೂ ಅಧಿಕ ಮತಗಳ‌ ಅಂತರದಿಂದ ಗೆದ್ದಿದ್ದೇನೆ, ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ ಎಂದರು.

ಸಿದ್ದರಾಮಯ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​​ಗಳು, ನನ್ನ ಮೇಲಿದ್ದ ಜನರ ವಿಶ್ವಾಸ, ಪಕ್ಷದ ಸಂಘಟನೆಯಿಂದ ಈ ಬಾರಿ ಗೆದ್ದಿದ್ದೇನೆ. ನನ್ನ ಗೆಲುವು ಜನರ ಗೆಲುವಾಗಿದೆ. ತಂದೆ ರಾಚಯ್ಯ ಅವರ ಸಮಾಧಿಗೆ ತೆರಳಿ ನಮಿಸಿ ಬಳಿಕ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲಕ್ಕೆ ಭೇಟಿ ನೀಡಿ ಬೆಂಗಳೂರಿಗೆ ತೆರಳುತ್ತೇನೆ ಎಂದು ತಿಳಿಸಿದರು.

Last Updated : May 13, 2023, 5:17 PM IST

ABOUT THE AUTHOR

...view details