ಮೈಸೂರು, ಕೊಡಗು, ಚಾಮರಾಜನಗರ: ರಾಜ್ಯದ ವಿವಿಧ ನಗರಗಳಲ್ಲಿ ಬಿಸಿಲಿನ ಬೇಗೆಯ ನಡುವೆಯೂ ವರುಣ ಕೃಪೆ ತೋರಿ ಮಳೆ ಸುರಿಸಿದ್ದು ಭೂಮಿಯನ್ನು ತಂಪಾಗಿಸಿದ್ದಾನೆ.
ಮೈಸೂರು ಜಿಲ್ಲೆಯಾದ್ಯಂತ ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದ್ದು, ಯುಗಾದಿ ಸಂವತ್ಸರ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಹಳೆ ಮೈಸೂರು ಭಾಗದ ಹಲವು ಜಿಲ್ಲೆಗಳಲ್ಲಿ ವರುಣ ದೇವ ರೈತರಿಗೆ ಶುಭ ಸೂಚನೆ ನೀಡಿದ್ದಾನೆ. ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನ ಜೀವನ ಅಸ್ಥವ್ಯಸ್ತಗೊಂಡಿದ್ದು, ಬೀದಿ ವ್ಯಾಪಾರಿಗಳು ಮಳೆಯಿಂದ ಪರದಾಡುವಂತಾಯಿತು.
ಇನ್ನೂ ಚಾಮರಾಜನಗರ ಜಿಲ್ಲೆಯಲ್ಲೂ ಕೂಡ ವರುಣದೇವ ಕೃಪೆ ತೋರಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೋರು ಮಳೆಯಾಗಿದೆ. ಬಂಡೀಪುರ ಕ್ಯಾಂಪಸ್, ಮೇಲುಕಾಮನಹಳ್ಳಿ, ಮೂಲೆಹೊಳೆ, ಗೋಪಾಲಸ್ವಾಮಿ ಬೆಟ್ಟದ ವಲಯ, ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ, ಬೆಳವಾಡಿ, ಶಿವಪುರ ಸೇರಿದಂತೆ ಹಲವೆಡೆ ಬಿಟ್ಟುಬಿಟ್ಟು ಎರಡ್ಮೂರು ಬಾರಿ ಜೋರು ಮಳೆಯಾಗಿದೆ.
ಮೈಸೂರು, ಕೊಡಗು, ಚಾಮರಾಜನಗರಗಳಲ್ಲಿ ಮಳೆ ಕೊಡಗು ಜಿಲ್ಲೆಯಲ್ಲಿ ಕೂಡು ತುಂತುರು ಮಳೆಯ ಸಿಂಚನವಾಗಿದೆ, ಕಾಯ್ದು ಕಾವಲಿಯಂತಿದ್ದ ಇಳೆಗೆ ಮಳೆ ತಂಪೆರೆದಿದೆ. ಭ್ರಹ್ಮಗಿರಿ ತಪ್ಪಲು-ತಲಕಾವೇರಿ, ಭಾಗಮಂಡಲದಲ್ಲಿ ಜೋರು ಮಳೆಯಾಗಿದ್ದರೆ. ನಾಪೋಕ್ಲೊ ಭಾಗದಲ್ಲಿ ತುಂತುರು ಮಳೆಯಾಗಿದೆ. ಬೆಳಗ್ಗೆಯಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ಮಡಿಕೇರಿಯಲ್ಲೂ ತುಂತುರು ಮಳೆಯ ಸಿಂಚನವಾಗಿದೆ. ಕಾಫಿಗೆ ಕೂಡ ಮಳೆಯ ಅಗತ್ಯವಿದ್ದು, ಮಳೆಯ ಸಿಂಚನದಿಂದ ಕಾಫಿ ಬೆಳೆಗಾರರೂ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೆರಡು ದಿನಗಳು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಘಟಕದ ವಿಜ್ಞಾನಿ ಸಹನಾ ಹೆಗ್ಡೆ ಮಾಹಿತಿ ನೀಡಿದ್ದಾರೆ.