ಚಾಮರಾಜನಗರ:ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು ಜಲಾಶಯಗಳು, ಕೆರೆ ಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರಿನ ಹತ್ತಾರು ಕೆರೆಗಳು ಕೋಡಿ ಬಿದ್ದಿವೆ. ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಬೆಳೆಗಳು ಜಲಾವೃತವಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಪ್ರವಾಹ ಸ್ಥಿತಿ ನಿರ್ಮಾಣ:ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಂದ 1,400 ಕ್ಯೂಸೆಕ್‌ಗಳಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದೆ. ಮರಗದಕೆರೆ, ಕೋಡಿಮೋಳೆ ಕೆರೆ ಸೇರಿದಂತೆ ವಿವಿಧ ಕೆರೆಗಳ ಹೆಚ್ಚುವರಿ ನೀರು ಕೂಡ ಸುವರ್ಣಾವತಿ ನದಿ ಸೇರುತ್ತಿದ್ದು, ಅದರ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಯಳಂದೂರಿನಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮೋಳೆ, ದೊಡ್ಡಮೋಳೆ, ಬ್ಯಾಡಮೂಡ್ಲು ಗ್ರಾಮಗಳಲ್ಲಿ ಕೆರೆಗಳು ಉಕ್ಕಿ ಹರಿದಿರುವುದರಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ಮತ್ತೆ ಜಲಾವೃತಗೊಂಡ ರಾಮನಗರ: ಕಾರ್ಮಿಕರ ಆಹಾರ ಸಾಮಗ್ರಿಗಳು ನೀರುಪಾಲು
ಕೊಳ್ಳೇಗಾಲ- ರಾಮಾಪುರ ಮಾರ್ಗದ ರಸ್ತೆ ಬಂದ್: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 3 ದಿನಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಹೂಗ್ಯಂ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ಕೊಳ್ಳೇಗಾಲ- ರಾಮಾಪುರ ಮಾರ್ಗದ ರಸ್ತೆ ಬಂದ್ ಆಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಭಾರಿ ಮಳೆ : ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್, ಅಪಾರ ಬೆಳೆಹಾನಿ