ಚಾಮರಾಜನಗರ: ಪೂರ್ವ ಮುಂಗಾರು ಮಳೆ ಚುರುಕುಗೊಂಡಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಬಹುಪಾಲು ಅರಣ್ಯ ಪ್ರದೇಶ ಹಸಿರಾಗುತ್ತಿರುವುದು ಅರಣ್ಯ ಇಲಾಖೆಯಲ್ಲಿ ಮಂದಹಾಸ ಮೂಡಿಸಿದೆ. ಬಂಡೀಪುರ ಹುಲಿ ಸಂರಕ್ಷಿತ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮದ ವಿವಿಧ ವಲಯಗಳು ಹಾಗೂ ಕಾಡಂಚಿನಲ್ಲಿ ಹಸಿರು ಚಿಗುರೊಡೆಯುತ್ತಿದ್ದು ಸದ್ಯ ಕಾಳ್ಗಿಚ್ಚಿನ ಆತಂಕ ದೂರವಾಗಿದೆ.
ಬೇಸಿಗೆಯಿಂದ ಬಾಡಿ ಹೋಗಿದ್ದ ಗಿಡಮರಗಳು ಹಾಗೂ ಬೆಂಕಿ ರೇಖೆ ನಿರ್ಮಾಣದ ಸಮಯದಲ್ಲಿ ಕುರುಚಲು ಗಿಡಗಳನ್ನು ತೆರವುಗೊಳಿಸಿದ್ದ ಸ್ಥಳದಲ್ಲಿ ಈಗ ಹಸಿರು ಚಿಗುರೊಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಾಳರಾಗಿದ್ದಾರೆ. ನಿತ್ಯ ಒಂದಲ್ಲ ಒಂದು ದಿನ ಕಾಡುಗಳಲ್ಲಿ ಮಳೆಯಾಗುತ್ತಿದ್ದು, ಬೆಂಕಿ ಆತಂಕ ದೂರವಾಗಿದೆ.