ಚಾಮರಾಜನಗರ: ಕ್ಷೇತ್ರಕ್ಕಾಗಿ ಪರದಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷೇತ್ರ ಹುಡುಕಿ ಕೊಡಬೇಕಿದೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಟೀಕಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಈ ರಾಜ್ಯದ ಹಿರಿಯ ರಾಜಕಾರಣಿ- ಸಚಿವ, ಡಿಸಿಎಂ, ಸಿಎಂ ಈಗ ವಿಪಕ್ಷ ನಾಯಕರಾಗಿದ್ದಾರೆ. ಅವರಿಗೇ ನಿಲ್ಲಲು ಒಂದು ಕ್ಷೇತ್ರ ಇಲ್ಲದಿರುವುದು, ಹೇಳೋದಿಕ್ಕೆ ನಾಚಿಕೆ ಆಗುತ್ತಿದೆ. ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರಿಲ್ಲ, ಎರಡು ದಿನ ಬಿಟ್ಟು ಹೈಕಮಾಂಡ್ ಭೇಟಿ ಮಾಡುತ್ತಿದ್ದಾರೆ. ಕ್ಷೇತ್ರಕ್ಕಾಗಿ ಪರದಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಕ್ಷೇತ್ರ ಹುಡುಕಿ ಕೊಡಬೇಕಿದೆ ಎಂದು ಲೇವಡಿ ಮಾಡಿದರು.
ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗುಟುಕು ನೀರಿನಿಂದ ಗೆದ್ದಿದ್ದಾರೆ. ಸಿದ್ದರಾಮಯ್ಯಗೆ ಜನರ ಮೇಲೆ ನಂಬಿಕೆ ಇಲ್ಲವೇ, ಮತದಾರರ ಮೇಲೆ ನಂಬಿಕೆ ಇಲ್ಲವೇ, ಬನ್ನಿ ಮೈಸೂರು ಜಿಲ್ಲೆಗೆ, ಜನರ ಮೇಲೆ ಸಿದ್ದರಾಮಯ್ಯ ಅವರು ನಂಬಿಕೆ ಇಟ್ಟಿಲ್ಲ, ಇನ್ನು ಅವರ ಪಾರ್ಟಿ ಮೇಲೆ ಜನರು ನಂಬಿಕೆ ಇಡುತ್ತಾರೆಯೇ ಎಂದು ಕಿಡಿಕಾರಿದರು. ಸಚಿವ ಸೋಮಣ್ಣ ಪಕ್ಷ ಬಿಡುತ್ತಿಲ್ಲ, ಹೈಕಮಾಂಡ್ ಜೊತೆ ಎಲ್ಲಾ ಮಾತನಾಡಿದ್ದಾರೆ. ಅವರಿಗೆ ಚಾಮರಾಜನಗರ ಚುನಾವಣಾ ಉಸ್ತುವಾರಿ ಕೊಟ್ಟಿದ್ದಾರೆ. ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು. ಇನ್ನು ಇದೇ ವೇಳೆ, ಚಾಮರಾಜನಗರ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.